ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದಿನಿಂದ ಟೆಸ್ಟ್ ಸರಣಿ ಆರಂಭವಾಗುತ್ತಿದ್ದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ.
ಬಹಳ ದಿನಗಳ ನಂತರ ಟೀಂ ಇಂಡಿಯಾ ಕ್ರಿಕೆಟಿಗರು ಸುದೀರ್ಘ ಬ್ರೇಕ್ ಪಡೆದುಕೊಂಡು ಕಣಕ್ಕೆ ಮರಳುತ್ತಿದ್ದಾರೆ. ಗೌತಮ್ ಗಂಭೀರ್ ಕೋಚ್ ಆದ ಬಳಿಕ ಇದು ಮೊದಲ ಟೆಸ್ಟ್ ಸರಣಿಯಾಗಿದೆ. ಅದರಲ್ಲೂ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಅಂಕಪಟ್ಟಿಯ ದೃಷ್ಟಿಯಿಂದ ಭಾರತಕ್ಕೆ ಇದು ಮಹತ್ವದ ಪಂದ್ಯವಾಗಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವೆ ಇದುವರೆಗೆ 13 ಟೆಸ್ಟ್ ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 11 ಪಂದ್ಯಗಳನ್ನು ಗೆದ್ದರೆ ಉಳಿದ ಎರಡು ಪಂದ್ಯಗಳು ಡ್ರಾ ಆಗಿವೆ. ಇದುವರೆಗೆ ಬಾಂಗ್ಲಾ ವಿರುದ್ಧ ಭಾರತ ತಂಡ ಟೆಸ್ಟ್ ಪಂದ್ಯದಲ್ಲಿ ಸೋತ ಉದಾಹರಣೆಯೇ ಇಲ್ಲ. ಹೀಗಾಗಿ ಈ ಒಂದು ಕನಸು ಬಾಂಗ್ಲಾದೇಶಕ್ಕೆ ಇದುವರೆಗೆ ನನಸಾಗಿಲ್ಲ.
ಇನ್ನು ಈ ಪಂದ್ಯವನ್ನು ಗೆದ್ದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾಗೆ 179 ನೇ ಗೆಲುವಾಗಲಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ಸೋತಿದ್ದಕ್ಕಿಂತ ಟೀಂ ಇಂಡಿಯಾ ಗೆಲುವಿನ ಸಂಖ್ಯೆ ಹೆಚ್ಚಾಗಲಿದೆ. ಇನ್ನು, ಈ ಪಂದ್ಯವನ್ನು ಗೆದ್ದರೆ ಟೀಂ ಇಂಡಿಯಾ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ ನಂ.1 ಪಟ್ಟವನ್ನು ಭದ್ರಪಡಿಸಿಕೊಳ್ಳಲಿದೆ. ಈ ಪಂದ್ಯ 9.30 ಕ್ಕೆ ಆರಂಭವಾಗಲಿದ್ದು ಜಿಯೋ ಸಿನಿಮಾದಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.