ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ವಿರಾಟ್ ಕೊಹ್ಲಿ ಕ್ರೀಸ್ ಗೆ ಬಂದರೇ ಈಗ ವಿಶ್ವದಾಖಲೆಗಳು ಒಂದೊಂದಾಗಿ ಅವರನ್ನರಸಿ ಬರುತ್ತಿವೆ. ಭಾರತದ ರನ್ ಮೆಷಿನ್ ಈಗ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರ ವಿಶ್ವ ದಾಖಲೆಯೊಂದನ್ನು ಮುರಿಯುವ ಅವಕಾಶ ಪಡೆದಿದ್ದಾರೆ. ಇದಕ್ಕೆ ಅವರು ಕೇವಲ 58 ರನ್ ಗಳಿಸಿದರೆ ಸಾಕು.
ಸೆಪ್ಟೆಂಬರ್ 19 ರಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಕೊಹ್ಲಿ58 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 27,000 ರನ್ ಪೂರೈಸಿದ ದಾಖಲೆ ಮಾಡಲಿದ್ದಾರೆ.
ಈ ಮೊದಲು ಈ ದಾಖಲೆಯನ್ನು ಭಾರತದ ಪರ ಸಚಿನ್ ತೆಂಡುಲ್ಕರ್ ಮಾಡಿದ್ದರು. ಇದೀಗ ಕೊಹ್ಲಿಗೆ ಆ ದಾಖಲೆ ದಾಟುವ ಅವಕಾಶ ಸಿಕ್ಕಿದೆ. ಇದುವರೆಗೆ 591 ಇನಿಂಗ್ಸ್ ಆಡಿರುವ ಕೊಹ್ಲಿ ಟೆಸ್ಟ್, ಏಕದಿನ, ಟಿ20 ಸೇರಿದಂತೆ ಮೂರೂ ಮಾದರಿಗಳಿಂದ 26,942 ರನ್ ಗಳಿಸಿದ್ದಾರೆ. ಇನ್ನು 58 ರನ್ ಗಳಿಸಿದರೆ ಅತೀ ವೇಗವಾಗಿ 27 ಸಾವಿರ ರನ್ ಗಳಿಸಿದ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.