ಮುಂಬೈ: ಟೀಂ ಇಂಡಿಯಾಕ್ಕೆ ಮರಳಲು ರಣಜಿ ಟ್ರೋಫಿ ಆಡುವಂತೆ ಕೋಚ್ ರಾಹುಲ್ ದ್ರಾವಿಡ್ ನೀಡಿರುವ ಸಲಹೆಯನ್ನು ಕಡೆಗಣಿಸಿರುವ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಇದೀಗ ಹಾರ್ದಿಕ್ ಪಾಂಡ್ಯ ಜೊತೆ ಅಭ್ಯಾಸ ನಡೆಸುತ್ತಿದ್ದಾರೆ.
ಮಾನಸಿಕವಾಗಿ ಬಳಲಿರುವ ಕಾರಣ ನೀಡಿ ಇಶಾನ್ ಕಿಶನ್ ದ.ಆಫ್ರಿಕಾ ಸರಣಿಯಿಂದ ಹಿಂದೆ ಸರಿದಿದ್ದರು. ಅದಾದ ಬಳಿಕ ತಂಡಕ್ಕೆ ಮರಳಲು ರಣಜಿ ಟ್ರೋಫಿಯಲ್ಲಿ ಆಡಿ ಫಿಟ್ನೆಸ್ ಸಾಬೀತುಪಡಿಸುವಂತೆ ಕೋಚ್ ದ್ರಾವಿಡ್ ಸೂಚಿಸಿದ್ದರು. ಆದರೆ ದ್ರಾವಿಡ್ ಸಲಹೆಯನ್ನು ಕಡೆಗಣಿಸಿರುವ ಇಶಾನ್ ಇದುವರೆಗೆ ತಮ್ಮ ತವರು ಜಾರ್ಖಂಡ್ ಪರ ರಣಜಿ ಟ್ರೋಫಿ ಪಂದ್ಯವಾಡಿಲ್ಲ. ಹೀಗಾಗಿ ಅವರನ್ನು ಇದೀಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಪರಿಗಣಿಸಿಲ್ಲ.ಇಷ್ಟಾದರೂ ಇಶಾನ್ ಕೋಚ್ ಸಲಹೆಯನ್ನು ಪಾಲಿಸಿಲ್ಲ.
ಹಾರ್ದಿಕ್ ಜೊತೆ ಅಭ್ಯಾಸ ನಡೆಸಿದ ಇಶಾನ್
ಕೋಚ್ ಸಲಹೆಯನ್ನು ಕಡೆಗಣಿಸಿದ ಇಶಾನ್ ಕಿಶನ್ ಇದೀಗ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರ ಜೊತೆ ರಿಲಯನ್ಸ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುವುದು ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಇಶಾನ್ ಕ್ರಿಕೆಟ್ ನಿಂದ ದೂರವಿದ್ದರು. ಇದೀಗ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲು ಇಶಾನ್ ಸಿದ್ಧತೆ ಆರಂಭಿಸಿದ್ದಾರೆ. ಆದರೆ ಫೆಬ್ರವರಿ 9 ಕ್ಕೆ ರಣಜಿ ಟ್ರೋಫಿ ಪಂದ್ಯ ನಡೆಯಲಿದ್ದು, ಆ ಪಂದ್ಯದಲ್ಲೂ ಇಶಾನ್ ಭಾಗಿಯಾಗುವುದು ಅನುಮಾನವಾಗಿದೆ. ಆದರೆ ದೇಶೀಯ ಕ್ರಿಕೆಟ್ ನಲ್ಲಿ ಆಡದ ಹೊರತು ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪರಿಗಣಿಸುವುದು ಕಷ್ಟ.
ಸದ್ಯಕ್ಕೆ ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೆಎಸ್ ಭರತ್ ಬ್ಯಾಟಿಗನಾಗಿ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಇಶಾನ್ ಆಯ್ಕೆ ಮಾಡಬಹುದಿತ್ತು. ಆದರೆ ಮಾತು ಕೇಳದ ಇಶಾನ್ ರನ್ನು ಆಯ್ಕೆ ಮಾಡಲೂ ಬಿಸಿಸಿಐಗೆ ಮನಸ್ಸಿಲ್ಲ. ಹೀಗಾಗಿ ವಿಕೆಟ್ ಕೀಪರ್ ಸ್ಥಾನ ಎನ್ನುವುದು ಸಂದಿಗ್ಧತೆಯಲ್ಲಿದೆ.