ಅಹಮ್ಮದಾಬಾದ್: ಏಕದಿನ ವಿಶ್ವಕಪ್ 2023 ರ ಫೈನಲ್ ಪಂದ್ಯ ನಡೆದಿದ್ದ ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಗೆ ಐಸಿಸಿ ನೀಡಿರುವ ರೇಟಿಂಗ್ ಶಾಕಿಂಗ್ ಆಗಿದೆ.
ನವಂಬರ್ 19 ರಂದು ನಡೆದಿದ್ದ ಭಾರತ-ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದ ಪಿಚ್ ನಿರೀಕ್ಷಿಸಿದಷ್ಟು ತಿರುವು ನೀಡಿರಲಿಲ್ಲ. ಹೀಗಾಗಿ ಭಾರತೀಯ ಬೌಲರ್ ಗಳಿಗೆ ಸಹಾಯವಾಗಿರಲಿಲ್ಲ. ಈ ಪಂದ್ಯವನ್ನು ಭಾರತ ಸೋತು ನಿರಾಸೆ ಅನುಭವಿಸಿತ್ತು. ಕೋಚ್ ರಾಹುಲ್ ದ್ರಾವಿಡ್ ಕೂಡಾ ತಮ್ಮ ತಂಡದ ಸೋಲಿಗೆ ಪಿಚ್ ಕಾರಣ ಎಂದು ದೂರಿದ್ದರು.
ಇದೀಗ ಐಸಿಸಿ ಸಂಪ್ರದಾಯದಂತೆ ಪಿಚ್ ಗೆ ರೇಟಿಂಗ್ ನೀಡಿದೆ. ಫೈನಲ್ ಪಂದ್ಯಕ್ಕೆ ಬಳಸಲಾದ ಪಿಚ್ ಗೆ ಐಸಿಸಿ ಸಾಧಾರಣ (ಎವರೇಜ್) ಎಂದು ರೇಟಿಂಗ್ ನೀಡಿದೆ. ಆದರೆ ಮ್ಯಾಚ್ ರೆಫರಿ ಔಟ್ ಫೀಲ್ಡ್ ಅತ್ಯುತ್ತಮವಾಗಿತ್ತು ಎಂದಿದ್ದಾರೆ.
ಆದರೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸೆಮಿಫೈನಲ್ ನಡೆದಿದ್ದ ವಾಂಖೆಡೆ ಮೈದಾನದ ಪಿಚ್ ಗೆ ಉತ್ತಮ ರೇಟಿಂಗ್ ನೀಡಲಾಗಿದೆ. ಈ ಪಿಚ್ ನ್ನು ಭಾರತ ತಂಡದ ಅಣತಿಯಂತೆ ಕೊನೆಯ ಕ್ಷಣದಲ್ಲಿ ಬದಲಾಯಿಸಲಾಗಿತ್ತು ಎಂದು ಕೆಲವರು ಆರೋಪಿಸಿದ್ದರು. ಎರಡನೇ ಸೆಮಿಫೈನಲ್ ನಡೆದಿದ್ದ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದ ಪಿಚ್ ಗೂ ಸಾಧಾರಣ ಎಂದು ರೇಟಿಂಗ್ ನೀಡಲಾಗಿದೆ.