ದುಬೈ: 2018 ನೇ ಸಾಲಿನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಆಟಗಾರರಿಗೆ ಐಸಿಸಿ ನೀಡಿರುವ ಪ್ರಶಸ್ತಿ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಸಿಂಹಪಾಲಾದರೆ, ಟೀಂ ಇಂಡಿಯಾದ ಇನ್ನೊಬ್ಬ ಯುವ ಕ್ರಿಕೆಟಿಗ ರಿಷಬ್ ಪಂತ್ ಕೂಡಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಿಷಬ್ ಟೆಸ್ಟ್ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಕ್ಕೆ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಇನ್ನು, ವರ್ಷದ ಕ್ರಿಕೆಟಿಗ, ಏಕದಿನ, ಟೆಸ್ಟ್ ಆಟಗಾರ ಪ್ರಶಸ್ತಿ ಕೊಹ್ಲಿ ಪಾಲಾಗಿರುವುದು ಗೊತ್ತೇ ಇದೆ.
ಅದಲ್ಲದೆ, ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಮತ್ತು ಏಕದಿನ ತಂಡದಲ್ಲೂ ಟೀಂ ಇಂಡಿಯಾ ಆಟಗಾರರು ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ಎರಡೂ ತಂಡಕ್ಕೆ ಕೊಹ್ಲಿಯೇ ನಾಯಕರಾಗಿದ್ದಾರೆ. ಸದಸ್ಯರಲ್ಲೂ ಟೀಂ ಇಂಡಿಯಾ ಆಟಗಾರರಿಗೇ ಹೆಚ್ಚಿನ ಪಾಲು ದೊರೆತಿದೆ.
ಐಸಿಸಿ ಟೆಸ್ಟ್ ತಂಡದಲ್ಲಿ ಕೊಹ್ಲಿ ಹೊರತಾಗಿ ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್ ಸ್ಥಾನ ಪಡೆದಿದ್ದಾರೆ. ಏಕದಿನ ತಂಡದಲ್ಲಿ ಕೊಹ್ಲಿ ಅಲ್ಲದೆ ರೋಹಿತ್ ಶರ್ಮಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಸ್ಥಾನ ಗಳಿಸಿದ್ದಾರೆ. ಅಂತೂ ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಭಾರತೀಯರದ್ದೇ ಮೇಲುಗೈಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ