ದುಬೈ: ಚಾಂಪಿಯನ್ಸ್ ಟ್ರೋಫಿ 2025 ರ ಸೆಮಿಫೈನಲ್ ಪಂದ್ಯದಲ್ಲಿ ತಂಡದ ಗೆಲುವಿನ ರೂವಾರಿಯಾದ ವಿರಾಟ್ ಕೊಹ್ಲಿ ಗೆಲುವಿನ ಹೊಸ್ತಿಲಲ್ಲಿ ಔಟಾದಾಗ ಪಕ್ಕದಲ್ಲಿದ್ದ ಕೆಎಲ್ ರಾಹುಲ್ ನಾನು ಹೊಡೀತಿರ್ಲಿಲ್ವಾ ಎಂದು ಕೂಗಾಡಿದ ಪರಿ ಎಲ್ಲರ ಮನಗೆದ್ದಿದೆ. ರಾಹುಲ್ ಎಷ್ಟು ಒಳ್ಳೆಯವರು ಎನ್ನುತ್ತಿದ್ದಾರೆ ಫ್ಯಾನ್ಸ್.
ಕೊನೆಯ ಹಂತದಲ್ಲಿ ಬಾಲ್ ಟು ಬಾಲ್ ಪರಿಸ್ಥಿತಿಯಿದ್ದಾಗ ಎರಡು ದೊಡ್ಡ ಹೊಡೆತಗಳ ಅಗತ್ಯವಿತ್ತು. ಆಗಲೇ ಕೊಹ್ಲಿ 84 ರಲ್ಲಿದ್ದರು. ಮತ್ತೊಂದು ಶತಕದ ಹೊಸ್ತಿಲಲ್ಲಿದ್ದರು. ಶತಕಕ್ಕಿಂತ ಅವರು ಈ ಇನಿಂಗ್ಸ್ ನಲ್ಲಿ ಜವಾಬ್ಧಾರಿ ಹೊತ್ತು ಆಡಿದ ಪರಿ ನೋಡಿದರೆ ಗೆಲುವಿನವರೆಗೂ ಅವರೇ ಕ್ರೀಸ್ ನಲ್ಲಿದ್ದರೆ ಚೆನ್ನಾಗಿತ್ತು ಎನ್ನುವ ಪರಿಸ್ಥಿತಿಯಿತ್ತು. ಅದಕ್ಕೆ ಅವರು ಅರ್ಹರಾಗಿದ್ದರು ಕೂಡಾ.
ಆದರೆ ದುರದೃಷ್ಟವಶಾತ್ ದೊಡ್ಡ ಹೊಡೆತಕ್ಕೆ ಕೈಹಾಕಲು ಹೋಗಿ ಕೊಹ್ಲಿ 84 ರನ್ ಆಗಿದ್ದಾಗ ಔಟಾದರು. ಅವರು ಔಟಾದಾಗ ಅವರಿಗಿಂತ ಹೆಚ್ಚು ಬೇಸರಗೊಂಡಿದ್ದು ಇನ್ನೊಂದು ತುದಿಯಲ್ಲಿದ್ದ ಕೆಎಲ್ ರಾಹುಲ್. ನಾನು ಹೊಡೀತಿರ್ಲಿಲ್ವಾ ನೀವ್ಯಾಕೆ ಎತ್ತಿ ಹೊಡೆಯಲು ಹೋದಿರಿ ಎಂದು ರಾಹುಲ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ಆದರೆ ಕೊಹ್ಲಿ ಮಾತ್ರ ನಗುತ್ತಲೇ ಹೊರನಡೆದರು. ತಾವೇ ಔಟಾದವರಂತೆ ಬೇಸರ ವ್ಯಕ್ತಪಡಿಸಿದ ರಾಹುಲ್ ನೋಡಿ ಅಭಿಮಾನಿಗಳು ನೀವು ಎಷ್ಟು ಒಳ್ಳೆಯವರು ಎಂದು ಕೊಂಡಾಡಿದ್ದಾರೆ.
ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ಅವರು ಕ್ರೀಸ್ ಗೆ ಬಂದ ತಕ್ಷಣ ಕೊಹ್ಲಿಗೆ ಏನು ಹೇಳಿದ್ದೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ನಾನು ಕ್ರೀಸ್ ಗೆ ಬಂದಾಗ ವಿರಾಟ್ ಗೆ ನಾನು ದೊಡ್ಡ ಹೊಡೆತ ಹೊಡೆಯುತ್ತೇನೆ. ನೀವು ಕೊನೆಯವರೆಗೂ ಇರಬೇಕು ಎಂದಿದ್ದೆ. ಪ್ರತೀ ಓವರ್ ನಲ್ಲಿ ನಾನು ರಿಸ್ಕ್ ತೆಗೆದುಕೊಳ್ಳುತ್ತೇನೆ, ನೀವು ಸೆಟ್ ಬ್ಯಾಟಿಗ ಕೊನೆಯವರೆಗೂ ಇರಿ ಎಂದಿದ್ದೆ ಎಂದು ರಾಹುಲ್ ಹೇಳಿದ್ದಾರೆ. ಅವರ ಈ ಮಾತು ಕೇಳಿದ ಮೇಲಂತೂ ಅಭಿಮಾನಿಗಳು ಫಿದಾ ಆಗಿದ್ದಾರೆ.