ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ.
ಆದರೆ ತಂಡ ಸಂಕಷ್ಟದಲ್ಲಿದ್ದಾಗ ಆಸರೆಯಾಗಿ ಜಯ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕೆಎಲ್ ರಾಹುಲ್ ಗೆ ಕೊನೆಗೂ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮ ಬಾಲ್ ನಲ್ಲಿ ಸಿಕ್ಸರ್ ಸಿಡಿಸಿದ ರಾಹುಲ್ 97 ರನ್ ಗಳಿಸಿ ಅಜೇಯರಾಗುಳಿದರು. ಶತಕ ಗಳಿಸಲಾಗದೆ ಶಾಕ್ ನಲ್ಲಿ ಕ್ರೀಸ್ ನಲ್ಲೇ ಕೂತು ನಿರಾಸೆ ವ್ಯಕ್ತಪಡಿಸಿದರು.
ಆದರೆ ರಾಹುಲ್ ಶತಕ ಗಳಿಸಲು ಸಾಧ‍್ಯವಾಗದೇ ಇದ್ದಿದ್ದಕ್ಕೆ ಅಭಿಮಾನಿಗಳು ಹಾರ್ದಿಕ್ ಪಾಂಡ್ಯರನ್ನು ದೂರಿದ್ದಾರೆ. ಹಾರ್ದಿಕ್ ಪಾಂಡ್ಯ 39.5 ನೇ ಓವರ್ ನಲ್ಲಿ 176 ರನ್ ಗಳಿಸಿದ್ದಾಗ ಸಿಕ್ಸರ್ ಸಿಡಿಸಿದರು. ಆಗ ಬಾಲ್ ಕೂಡಾ ಸಾಕಷ್ಟಿತ್ತು. ಬಹುಶಃ ಹಾರ್ದಿಕ್ ಸಿಂಗಲ್ಸ್ ತೆಗೆದು ರಾಹುಲ್ ಗೆ ಹೆಚ್ಚು ಸ್ಟ್ರೈಕ್ ಕೊಡುತ್ತಿದ್ದರೆ ಅವರು ಶತಕ ಗಳಿಸುತ್ತಿದ್ದರು. ಆದರೆ ಹಾರ್ದಿಕ್ ಆಗ ಅನಗತ್ಯವಾಗಿ ಸಿಕ್ಸರ್ ಸಿಡಿಸಿ ರಾಹುಲ್ ಗೆ ಅರ್ಹವಾಗಿದ್ದ ಶತಕ ವಂಚಿಸಿ ಸ್ವಾರ್ಥಿಯಾದರು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಮೊದಲು ಹಿಂದೊಮ್ಮೆ ತಿಲಕ್ ವರ್ಮಗೆ ಅರ್ಧಶತಕ ಗಳಿಸಲು ಅವಕಾಶ ಕೊಡದೇ ಹಾರ್ದಿಕ್ ಟೀಕೆಗೊಳಗಾಗಿದ್ದರು.