ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿರುವ ಟೀಂ ಇಂಡಿಯಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದೆ.
ಇಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಎರಡನೇ ಓವರ್ ನಲ್ಲಿಯೇ ಮಿಚೆಲ್ ಮಾರ್ಷ್ (0) ವಿಕೆಟ್ ಕಳೆದುಕೊಂಡಿತು. ಆದರೆ ಬಳಿಕ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಜೋಡಿ ಎಚ್ಚರಿಕೆಯ ಆಟವಾಡಿ ಎರಡನೇ ವಿಕೆಟ್ ಗೆ 69 ರನ್ ಗಳ ಜೊತೆಯಾಟವಾಡಿತು.
ಈ ಇಬ್ಬರನ್ನು ಬೇರ್ಪಡಿಸಿದ್ದು ಕುಲದೀಪ್ ಯಾದವ್. ಇಲ್ಲಿಂದ ಭಾರತದ ಸ್ಪಿನ್ ಜಾದೂ ಶುರುವಾಯಿತು. ಇದಾದ ಬಳಿಕ ರವೀಂದ್ರ ಜಡೇಜಾ ಬೆನ್ನು ಬೆನ್ನಿಗೆ ಸ್ಟೀವ್ ಸ್ಮಿತ್, ಲಬುಶೇನ್ ವಿಕೆಟ್ ಕಬಳಿಸಿದಾಗ ಆಸೀಸ್ ಸಂಕಷ್ಟಕ್ಕೀಡಾಯಿತು. ಸ್ಟೀವ್ 46 ರನ್ ಗಳಿಸಿ ಔಟಾದರೆ ಲಬುಶೇನ್ 27 ರನ್ ಗಳಿಸಿದರು. ಆಸ್ಟ್ರೇಲಿಯಾಗೆ ಎಂದಿನಂತೆ ಬಿರುಸಿನ ಆಟವಾಡಲು ಟೀಂ ಇಂಡಿಯಾ ಬೌಲರ್ ಗಳು ಅವಕಾಶ ಕೊಡಲೇ ಇಲ್ಲ. ಜಡೇಜಾ ಚೆನ್ನೈ ಮೈದಾನದಲ್ಲಿ ಸಾಕಷ್ಟು ಐಪಿಎಲ್ ಪಂದ್ಯಗಳನ್ನಾಡಿದ್ದರಿಂದ ಅವರ ಅನುಭವ ಇಲ್ಲಿ ಭಾರತಕ್ಕೆ ಪ್ಲಸ್ ಪಾಯಿಂಟ್ ಆಯಿತು. ಇದೀಗ 40 ಓವರ್ ಗಳ ಆಟದ ಮುಕ್ತಾಯಕ್ಕೆ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ. ಭಾರತದ ಪರ ಜಡೇಜಾ 3, ಕುಲದೀಪ್ ಯಾದವ್ 2, ಬುಮ್ರಾ, ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದ್ದಾರೆ.