ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ಹಿರಿಯ ಆಟಗಾರರು ಕೆರೆಬಿಯನ್ ನಾಡಿನಲ್ಲಿ ತಮಗಾಗುತ್ತಿರುವ ಅಸೌಕರ್ಯಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿತ್ತು. ಅದನ್ನೀಗ ಹಾರ್ದಿಕ್ ಪಾಂಡ್ಯ ಬಹಿರಂಗವಾಗಿಯೇ ಹೊರಹಾಕಿದ್ದಾರೆ.
ಏಕದಿನ ಸರಣಿ ಬಳಿಕ ಮಾತನಾಡಿರುವ ಹಾರ್ದಿಕ್ ಪಾಂಡ್ಯ ಇಲ್ಲಿನ ಅವ್ಯವಸ್ಥೆ ಬಗ್ಗೆ ಕಿಡಿ ಕಾರಿದ್ದಾರೆ. ನಾಳೆಯಿಂದ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಟಿ20 ಏಕದಿನ ಪಂದ್ಯಕ್ಕೆ ಚಾಲನೆ ಸಿಗಲಿದೆ. ಇದಕ್ಕೆ ಮೊದಲು ಇಲ್ಲಿನ ವ್ಯವಸ್ಥೆ ಬಗ್ಗೆ ಹಾರ್ದಿಕ್ ಗೆ ಪ್ರಶ್ನೆ ಮಾಡಲಾಯಿತು.
ಈ ವೇಳೆ ಮಾತನಾಡಿರುವ ಅವರು ಕಳೆದ ಬಾರಿ ವಿಂಡೀಸ್ ಪ್ರವಾಸ ಮಾಡಿದ್ದಾಗಲೂ ನಮಗೆ ಇದೇ ಸಮಸ್ಯೆ ಎದುರಾಗಿತ್ತು. ಈಗಲೂ ಪ್ರಯಾಣದ್ದೇ ಸಮಸ್ಯೆಯಾಗಿದೆ. ನಾವು ಐಷಾರಾಮಿ ಸೌಲಭ್ಯ ಕೇಳುತ್ತಿಲ್ಲ. ಆದರೆ ಕನಿಷ್ಠ ಮೂಲಭೂತ ಸೌಕರ್ಯವನ್ನಾದರೂ ಸರಿಯಾಗಿ ಒದಗಿಸಲಿ ಎಂದು ವಿಂಡೀಸ್ ಮಂಡಳಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಏಕದಿನ ಸರಣಿ ಆರಂಭಕ್ಕೆ ಮುನ್ನ ಪ್ರಯಾಣ ದೂರ ಮತ್ತು ವಿಮಾನ ವಿಳಂಬ ಮುಂತಾದ ಅವ್ಯವಸ್ಥೆ ಬಗ್ಗೆ ಹಿರಿಯ ಆಟಗಾರರು ಬಿಸಿಸಿಐಗೆ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದರು ಎನ್ನಲಾಗಿತ್ತು. ಇದೀಗ ಹಾರ್ದಿಕ್ ಬಹಿರಂಗವಾಗಿಯೇ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.