ಬಾರ್ಬಡೋಸ್: ಐಪಿಡಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಸಿಕ್ಕಾಪಟ್ಟೆ ಅವಮಾನ ಅನುಭವಿಸಿದ್ದರು. ಆದರೆ ಈಗ ಟಿ20 ವಿಶ್ವಕಪ್ ನಲ್ಲಿ ಅದೇ ಹಾರ್ದಿಕ್ ಪಾಂಡ್ಯಗೆ ಸನ್ಮಾನವಾಗುತ್ತಿದೆ.
ಈ ಬಾರಿ ಐಪಿಎಲ್ ನಲ್ಲಿ ರೋಹಿತ್ ಶರ್ಮಾರನ್ನು ಕಿತ್ತು ಹಾಕಿ ಮುಂಬೈ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡಿದ್ದು ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯರನ್ನು ಹೋದಲ್ಲೆಲ್ಲಾ ಅಭಿಮಾನಿಗಳು ಮೂದಲಿಸುತ್ತಿದ್ದರು. ಅದೂ ಸಾಲದೆಂಬಂತೆ ಈ ಬಾರಿ ಮುಂಬೈ ಕಳಪೆ ಪ್ರದರ್ಶನ ನೀಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಸಾಕಷ್ಟು ಅವಮಾನ ಅನುಭವಿಸಿದ್ದ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದೂ ಕಷ್ಟ ಎಂಬ ಪರಿಸ್ಥಿತಿಯಿತ್ತು.
ಸ್ವತಃ ಆಯ್ಕೆ ಸಮಿತಿಗೇ ಪಾಂಡ್ಯರನ್ನು ಆಯ್ಕೆ ಮಾಡಲು ಇಷ್ಟವಿರಲಿಲ್ಲ. ಆದರೆ ಬಿಸಿಸಿಐನ ಅಧಿಕಾರಿಯೊಬ್ಬರ ಒತ್ತಡಕ್ಕೆ ಮಣಿದು ಅವರನ್ನು ಆಯ್ಕೆ ಮಾಡಲಾಯಿತು ಎಂದು ವರದಿಗಳಾಗಿತ್ತು. ಆದರೆ ಇದೀಗ ಅದೇ ಹಾರ್ದಿಕ್ ಪಾಂಡ್ಯರೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿ ಭಾರತಕ್ಕೆ ಗೆಲುವು ತಂದುಕೊಡುತ್ತಿದ್ದಾರೆ.
ಎಲ್ಲಾ ಪಂದ್ಯಗಳಲ್ಲೂ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ನಲ್ಲೂ ಹಾರ್ದಿಕ್ ಪಾಂಡ್ಯ ಮಿಂಚುತ್ತಿದ್ದು, ತಮಗೆ ಕಾಂಪಿಟೇಟರ್ ಆಗಿರುವ ಶಿವಂ ದುಬೆಯನ್ನು ಸೈಡ್ ಲೈನ್ ಮಾಡಿ ತಮ್ಮ ಅನುಭವ ಏನೆಂದು ತೋರಿಸಿಕೊಟ್ಟಿದ್ದಾರೆ. ಅಂದು ಅವಮಾನ ಅನುಭವಿಸಿದ್ದ ಅದೇ ಅಭಿಮಾನಿಗಳಿಂದ ಈಗ ಹೊಗಳಿಸಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ.