ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿರುವ ಗೌತಮ್ ಗಂಭೀರ್ ಇಂದು ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಪ್ರಶ್ನೆ ಕೇಳಿದಾಗ ಗಂಭೀರ್ ಸಿಟ್ಟಾದ ಘಟನೆಯೂ ನಡೆದಿದೆ.
ಗೌತಮ್ ಗಂಭೀರ್ ಮತ್ತು ಕೊಹ್ಲಿ ನಡುವೆ ಐಪಿಎಲ್ ಸಂದರ್ಭದಲ್ಲಿ ನಡೆದಿದ್ದ ವಿವಾದಗಳು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಈ ನಡುವೆ ಗಂಭೀರ್ ತಂಡದ ಕೋಚ್ ಆಗಿ ಆಯ್ಕೆಯಾದಾಗ ಅನೇಕರು ಇವರ ನಡುವೆ ಹೊಂದಾಣಿಕೆ ಸರಿ ಹೋಗಬಹುದೇ ಎಂದು ಅನುಮಾನ ಪಟ್ಟಿದ್ದರು. ಇದರ ನಡುವೆ ಕೊಹ್ಲಿ ಬಿಸಿಸಿಐ ಜೊತೆ ಮಾತುಕತೆ ನಡೆಸಿದ್ದು ಗಂಭೀರ್ ಜೊತೆ ಕೆಲಸ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದಿರುವುದಾಗಿ ವರದಿಯಾಗಿತ್ತು.
ಇದೀಗ ಮೊದಲ ಸುದ್ದಿಗೋಷ್ಠಿಯಲ್ಲೇ ಪತ್ರಕರ್ತರೊಬ್ಬರು ಗಂಭೀರ್ ಗೆ ಕೊಹ್ಲಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇಬ್ಬರ ಸಂಬಂಧದ ಬಗ್ಗೆ ಕೇಳಿದಾಗ ಗಂಭೀರ್ ಸಿಟ್ಟಾದರು. ನಮ್ಮಿಬ್ಬರ ನಡುವೆ ಸಂಬಂಧ ಸರಿ ಇಲ್ಲ ಎನ್ನುವುದು ಕೇವಲ ವದಂತಿಯಷ್ಟೇ. ಇದೆಲ್ಲಾ ಟಿಆರ್ ಪಿಗಾಗಿ ಸುದ್ದಿ ಮಾಡಬಹುದು. ಆದರೆ ನಾವಿಬ್ಬರೂ ಚೆನ್ನಾಗಿದ್ದೇವೆ. ನಾವು 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತೇವೆ ಎಂಬುದು ಮುಖ್ಯ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ವಿರಾಟ್ ಕೊಹ್ಲಿ ವಿಶ್ವದರ್ಜೆಯ ಆಟಗಾರ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಾವಿಬ್ಬರೂ ಸಂದೇಶಗಳನ್ನು ಹಂಚಿಕೊಂಡಿದ್ದೇವೆ. ಹೀಗಾಗಿ ನಮ್ಮಿಬ್ಬರ ನಡುವೆ ಸಂಬಂಧ ಸರಿಯಿಲ್ಲ ಎನ್ನುವುದೆಲ್ಲಾ ವದಂತಿಗಳಷ್ಟೇ ಎಂದು ಗಂಭೀರ್ ಹೇಳಿದ್ದಾರೆ.