ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಕ್ಯಾಪ್ಟನ್ ಕೂಲ್ ಬ್ಯಾಟಿಂಗ್ ಶೈಲಿಯ ಬಗ್ಗೆ ನೀಡಿದ ಹೇಳಿಕೆ ಧೋನಿ ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿದೆ.
ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಧೋನಿಯ ಬ್ಯಾಟಿಂಗ್ ಶೈಲಿ ನಿರಾಸೆ ಮೂಡಿಸಿದೆ. ಉತ್ತಮ ಪ್ರದರ್ಶನ ನೀಡಬಹುದಿತ್ತು. ಕೇದಾರ್ ಜಾಧವ್ ಮತ್ತು ಧೋನಿ ಮಧ್ಯದ ಪಾರ್ಟನರ್‌ಶಿಪ್ ಕೂಡಾ ನನಗೆ ಸಂತಸ ತಂದಿಲ್ಲ. ತುಂಬಾ ನಿಧಾನಗತಿಯ ಬ್ಯಾಟಿಂಗ್ ಆಗಿತ್ತು. 34 ಓವರ್‌ಗಳ ಸ್ಪಿನ್ ಬೌಲಿಂಗ್ ಎದುರಿಸಿ ಕೇವಲ 119 ರನ್ ಪೇರಿಸಿದ್ದೇವೆ. ಉತ್ತಮ ಪ್ರದರ್ಶನ ನೀಡುವ ಉತ್ಸಾಹ ಧೋನಿ ಮತ್ತು ಕೇದಾರ್‌ಗೆ ಇರುವುದು ಕಂಡು ಬರದಿರುವುದು ನಿರಾಸೆ ಮೂಡಿಸಿತು ಎಂದು ಸಚಿನ್ ತೆಂಡೂಲ್ಕರ್ ನೀಡಿದ ಹೇಳಿಕೆ ಧೋನಿ ಅಭಿಮಾನಿಗಳಿಗೆ ಕೋಪ ತರಿಸಿದೆ. ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಸಮರವೇ ಆರಂಭವಾಗಿದೆ.
38ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಔಟಾದ ನಂತರ 45ನೇ ಓವರ್ ವರೆಗೆ ಹೆಚ್ಚಿನ ರನ್ ಗಳಿಸಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮೆನ್ ನಿಧಾನಗತಿಯ ಆಟದಿಂದಾಗಿ ಕೊನೆಯಲ್ಲಿ ಬರುವ ಆಟಗಾರರ ಮೇಲೆ ಒತ್ತಡದಲ್ಲಿ ಹೆಚ್ಚಳವಾಯಿತು ಎಂದು ತಿಳಿಸಿದ್ದಾರೆ.
ಸಚಿನ್ ಹೇಳಿಕೆಯಿಂದ ಆಕ್ರೋಶಗೊಂಡ ಧೋನಿ ಅಭಿಮಾನಿಗಳು, ನೀವು ಕೇವಲ ಸ್ವಾರ್ಥಕ್ಕಾಗಿ ಕ್ರಿಕೆಟ್ ಆಡಿದ್ದೀರಿ. ಆದರೆ, ಧೋನಿ ದೇಶಕ್ಕಾಗಿ ಆಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.