ಲಂಡನ್: ಒಂದು ಸೋಲು ಎಂತಹವರನ್ನೂ ಧೃತಿಗೆಡಿಸಿಬಿಡುತ್ತದೆ. ಅದರಲ್ಲೂ ಕ್ರಿಕೆಟ್ ನಲ್ಲಿ ಒಂದು ಹೀನಾಯ ಸೋಲು ತಂಡದೊಳಗಿನ ಹುಳುಕುಗಳನ್ನು ಹೊರ ಹಾಕುತ್ತವೆ. ಅದಕ್ಕೆ ಇದೀಗ ದ.ಆಫ್ರಿಕಾ ಕ್ರಿಕೆಟ್ ತಂಡ ಸಾಕ್ಷಿ.
ಪಾಕಿಸ್ತಾನ ವಿರುದ್ಧ ಸೋತು ವಿಶ್ವಕಪ್ ಕ್ರಿಕೆಟ್ 2019 ರಿಂದ ನಿರ್ಗಮಿಸಿದ ದ.ಆಫ್ರಿಕಾ ಈಗ ಒಡೆದ ಮನೆಯಂತಾಗಿದೆ. ನಾಯಕ ಫಾ ಡು ಪ್ಲೆಸಿಸ್ ತಮ್ಮ ಸೋಲಿನ ಪರಾಮರ್ಶೆ ಮಾಡುತ್ತಾ ಐಪಿಎಲ್ ಮೇಲೆ ಗೂಬೆ ಕೂರಿಸಿದ್ದಾರೆ.
ಹಿಂದೆ ಡೇಲ್ ಸ್ಟೈನ್ ಗಾಯಗೊಂಡಿದ್ದಾಗ ಐಪಿಎಲ್ ಮೇಲೆ ಆರೋಪ ಮಾಡಿದ್ದ ಪ್ಲೆಸಿಸ್ ಈಗ ತಮ್ಮ ತಂಡದ ಪ್ರಮುಖ ವೇಗಿ ಕಗಿಸೊ ರಬಾಡಾ ಕಳಪೆ ಪ್ರದರ್ಶನಕ್ಕೂ ಐಪಿಎಲ್ ನ್ನು ದೂರಿದ್ದಾರೆ. ರಬಾಡ ಡೆಲ್ಲಿ ಪರ ಐಪಿಎಲ್ ಆಡಿದ್ದರು. ಗಾಯದಿಂದಾಗಿ ಅರ್ಧದಿಂದಲೇ ಟೂರ್ನಿಯಿಂದ ನಿರ್ಗಮಿಸಿದ್ದರು.
ನಮ್ಮ ತಂಡದ ಕೆಲವರಿಗೆ ವಿಶ್ರಾಂತಿಯ ಅಗತ್ಯವಿತ್ತು. ರಬಾಡಾರನ್ನು ಐಪಿಎಲ್ ಗೆ ಹೋಗದಂತೆ ತಡೆಯಲು ನಾನು ಮತ್ತು ತಂಡದ ಮ್ಯಾನೇಜ್ ಮೆಂಟ್ ಸಾಕಷ್ಟು ಪ್ರಯತ್ನಪಟ್ಟಿದ್ದೆವು. ಐಪಿಎಲ್ ನಲ್ಲಿ ಆಡದೇ ವಿಶ್ವಕಪ್ ಗೆ ಫ್ರೆಶ್ ಆಗಿ ಸಿದ್ಧರಾಗಲಿ ಎನ್ನುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅವರು ನಮ್ಮ ಮಾತು ಕೇಳಲಿಲ್ಲ. ಹೀಗಾಗಿ ಹೋಗಲಿ ಬಿಡಿ, ಅವರಿಗೂ ಸ್ವಲ್ಪ ಅನುಭವವಾಗಲಿ ಎಂದು ಬಿಟ್ಟು ಬಿಟ್ಟೆವು ಎಂದು ಪ್ಲೆಸಿಸ್ ಹೇಳಿದ್ದಾರೆ.