Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಂಚಿ: ಐಪಿಎಲ್ ಕೂಟದ ವೇಳೆ ಧೋನಿ ಪುತ್ರಿ ಜೀವಾ ಎಲ್ಲರ ಮನ ಗೆದ್ದಿದ್ದಳು. ಈ ಮುದ್ದು ಮಗಳ ಬಗ್ಗೆ ಧೋನಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
‘ನನ್ನ ಮಗಳೇ ನನ್ನನ್ನು ಒಬ್ಬ ವ್ಯಕ್ತಿಯಾಗಿ ಬದಲಾಯಿಸಿದಳು. ಎಲ್ಲಾ ಹೆಣ್ಣು ಮಕ್ಕಳಿಗೂ ಅಪ್ಪಂದಿರು ಹೆಚ್ಚು ಆಪ್ತರಾಗಿರುತ್ತಾರೆ. ನನ್ನ ವಿಚಾರದಲ್ಲೂ ಹಾಗೆ’ ಎಂದು ಧೋನಿ ಹೇಳಿಕೊಂಡಿದ್ದಾರೆ.
‘ಜೀವಾ ಹುಟ್ಟಿದಾಗ ನಾನು ಜತೆಯಲ್ಲಿರಲಿಲ್ಲ. ನಂತರವೂ ಅವಳ ಜತೆಗೆ ನಾನು ಮೈದಾನದಲ್ಲೇ ಇರುತ್ತಿದ್ದೆ. ಹೀಗಾಗಿ ಮನೆಯಲ್ಲಿ ಅವಳು ಊಟ ಮಾಡದಿದ್ದರೂ, ಏನೇ ತಪ್ಪು ಮಾಡುವಾಗಲೂ ಅಪ್ಪ ಬಂದುಬಿಡ್ತಾರೆ ಎಂದು ನನ್ನನ್ನೇ ದೂರುತ್ತಾರೆ. ಹೀಗಾಗಿ ಅವಳಿಗೆ ನಾನು ಒಂದು ಗುಮ್ಮನಂತಾಗಿದ್ದೆ!
ಆದರೆ ಐಪಿಎಲ್ ಸಂದರ್ಭದಲ್ಲಿ ಆಕೆಯ ಜತೆಗೆ ಸಾಕಷ್ಟು ಸಮಯ ಕಳೆದೆ. ಇಡೀ ಟೂರ್ನಿಯುದ್ದಕ್ಕೂ ಅವಳು ನನ್ನ ಜತೆಗಿದ್ದಳು. ಪ್ರತೀ ಬಾರಿ ಮೈದಾನಕ್ಕಿಳಿಯಲು ಬಿಡಬೇಕೆಂಬುದು ಅವಳ ಬೇಡಿಕೆಯಾಗಿತ್ತು. ಐಪಿಎಲ್ ಸಂದರ್ಭದಲ್ಲಿ ಹಲವು ಕ್ರಿಕೆಟಿಗರ ಮಕ್ಕಳಿದ್ದರು. ನಾನು ಮಧ್ಯಾಹ್ನ 2, 3 ಗಂಟೆಗೆ ಏಳುತ್ತಿದ್ದೆ. ಅಷ್ಟರಲ್ಲಿ ಅವಳು ಆ ಮಕ್ಕಳೊಂದಿಗೆ ಆಟವಾಡುತ್ತಿದ್ದಳು’ ಎಂದು ಧೋನಿ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.