ಬೆಂಗಳೂರು: 2023 ರ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಲೀಗ್ ಪಂದ್ಯಗಳಲ್ಲಿ ಎಲ್ಲಾ ಪಂದ್ಯವನ್ನೂ ಗೆದ್ದು ಹೊಸ ದಾಖಲೆ ಮಾಡಿತು. ಇಂದು ನೆದರ್ಲ್ಯಾಂಡ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ 160 ರನ್ ಗಳ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅಬ್ಬರದ ಬ್ಯಾಟಿಂಗ್ ನಡೆಸಿ 50 ಓವರ್ ಗಳಲ್ಲಿ 410 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಈ ಮೊತ್ತ ಬೆನ್ನತ್ತಿದ ನೆದರ್ಲ್ಯಾಂಡ್ಸ್ ಗೆ ಭಾರತದ ಬೌಲಿಂಗ್ ಎದುರು 47.5 ಓವರ್ ಗಳಲ್ಲಿ 250 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ಇಂದು ಸೆಮಿಫೈನಲ್ ಗೆ ಮುನ್ನ ಅಕ್ಷರಶಃ ಬೌಲಿಂಗ್ ಪ್ರಾಕ್ಟೀಸ್ ನಡೆಸಿತು. ಟೀಂ ಇಂಡಿಯಾ ಪರ ಇಂದು ಬರೋಬ್ಬರಿ 9 ಮಂದಿ ಬೌಲಿಂಗ್ ನಡೆಸಿದರು. ಖಾಯಂ ಬೌಲರ್ ಗಳಲ್ಲದೆ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶುಬ್ಮನ್ ಗಿಲ್, ರೋಹಿತ್ ಶರ್ಮಾ ಕೂಡಾ ತಮ್ಮ ಬೌಲಿಂಗ್ ಕಲೆ ಪ್ರದರ್ಶಿಸಿದರು. ಈ ಪೈಕಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಲಾ ಒಂದು ವಿಕೆಟ್ ಕೀಳುವಲ್ಲಿಯೂ ಸಫಲರಾದರು. ಉಳಿದಂತೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.