ಚೆನ್ನೈ: ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ರವಿಚಂದ್ರನ್ ಅಶ್ವಿನ್ ತಮ್ಮ ತಾಯಿಯ ಅನಾರೋಗ್ಯದ ಕಾರಣದಿಂದ ದಿಡೀರ್ ಆಗಿ ತವರಿಗೆ ಮರಳಬೇಕಾಯಿತು. ಈ ಘಟನೆ ಬಗ್ಗೆ ಅಶ್ವಿನ್ ಪತ್ನಿ ಪ್ರೀತಿ ಅಶ್ವಿನ್ ಆಂಗ್ಲ ಮಾಧ‍್ಯಮವೊಂದಕ್ಕೆ ಮಾತನಾಡಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 500 ವಿಕೆಟ್ ಗಳ ದಾಖಲೆ ಮಾಡಿದ್ದರು. ಆ ಖುಷಿಯನ್ನು ಮನೆಯವರೆಲ್ಲರೂ ಸಂಭ್ರಮಿಸುತ್ತಿರುವಾಗ ಅಶ್ವಿನ್ ತಾಯಿ ಕುಸಿದು ಬಿದ್ದರು. ಬಳಿಕ ನಾವೆಲ್ಲರೂ ಸಂಭ್ರಮ ಬಿಟ್ಟು ಆಸ್ಪತ್ರೆಯಲ್ಲಿ ಕೂರಬೇಕಾಯಿತು ಎಂದು ಪ್ರೀತಿ ಹೇಳಿದ್ದಾರೆ.
ಅಂದು ಸಂಜೆ ಮಕ್ಕಳು ಶಾಲೆಯಿಂದ ಬಂದ ಕೆಲವೇ ಕ್ಷಣಗಳಲ್ಲಿ ಅಶ್ವಿನ್ 500 ವಿಕೆಟ್ ಕಬಳಿಸಿದ್ದರು. ನಮಗೆ ಕರೆಗಳ ಮೇಲೆ ಕರೆ ಬರುತ್ತಿತ್ತು. ಎಲ್ಲರೂ ಅಭಿನಂದನೆ ಹೇಳುತ್ತಿದ್ದರು. ಈ ವೇಳೆ ಅತ್ತೆ ಸಡನ್ ಆಗಿ ಕಿರುಚಿಕೊಂಡು ಕುಸಿದು ಬಿದ್ದರು. ನಮಗೆಲ್ಲಾ ಗಾಬರಿಯಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದೆವು. ಮೊದಲು ನಾವು ಈ ವಿಚಾರವನ್ನು ಅಶ್ವಿನ್ ಗೆ ಹೇಳುವುದು ಬೇಡ ಎಂದುಕೊಂಡಿದ್ದೆವು. ಯಾಕೆಂದರೆ ರಾಜಕೋಟ್ ನಿಂದ ಚೆನ್ನೈಗೆ ಬರಲು ಸರಿಯಾದ ವಿಮಾನ ವ್ಯವಸ್ಥೆಯಿರಲಿಲ್ಲ. ಆದರೆ ಅತ್ತೆಯ ಸ್ಕ್ಯಾನಿಂಗ್ ವರದಿಗಳನ್ನು ನೋಡಿದ ಮೇಲೆ ವೈದ್ಯರು ಅಶ್ವಿನ್ ಪಕ್ಕದಲ್ಲಿದ್ದರೆ ಒಳ್ಳೆಯದು ಎಂದರು.
ಅದರಂತೆ ನಾನು ಮೊದಲು ಚೇತೇಶ್ವರ ಪೂಜಾರಗೆ ಫೋನ್ ಮಾಡಿ ಎಲ್ಲಾ ವಿಚಾರ ತಿಳಿಸಿದೆ. ಪೂಜಾರ ರಾಜ್ ಕೋಟ್ ನವರೇ ಆಗಿದ್ದರಿಂದ ನಮಗೆ ನೆರವು ಮಾಡಿದರು. ಪೂಜಾರ ಮತ್ತು ಕುಟುಂಬಕ್ಕೆ ನಾವು ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ನಮಗೆ ಅಶ್ವಿನ್ ರನ್ನು ಕರೆತರಲು ಪರಿಹಾರ ಸಿಕ್ಕ ನಂತರ ಅಶ್ವಿನ್ ಗೆ ಕರೆ ಮಾಡಿದೆವು. ನಮ್ಮ ಮಾತು ಕೇಳಿ ಅಶ್ವಿನ್ ಗೆ ತೀವ್ರ ಆಘಾತವಾಗಿತ್ತು. ಸುಧಾರಿಸಲು 20-25 ನಿಮಿಷ ಬೇಕಾಯಿತು. ಆ ಸಂದರ್ಭದಲ್ಲಿ ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಅಶ್ವಿನ್ ಗೆ ನೆರವಾಗಿತ್ತು. ಅಶ್ವಿನ್ ಇಲ್ಲಿಗೆ ತಲುಪುವವರೆಗೂ ಅವರು ಸಂಪರ್ಕದಲ್ಲಿದ್ದರು. ಕೊನೆಗೆ ಅಶ್ವಿನ್ ತಡರಾತ್ರಿ ಇಲ್ಲಿಗೆ ತಲುಪಿದರು.
ಐಸಿಯುವಿನಲ್ಲಿ ಅಮ್ಮನನ್ನು ನೋಡುವುದು ಅಶ್ವಿನ್ ಗೆ ಪ್ರಯಾಸಕರವಾಗಿತ್ತು. ಪರಿಸ್ಥಿತಿ ಸುಧಾರಿಸಿದ ನಂತರ ನಾವು ಅಶ್ವಿನ್ ಗೆ ಮರಳಲು ಹೇಳಿದೆವು. ಅವರು ಯಾವತ್ತೂ ಈ ರೀತಿ ಪಂದ್ಯವನ್ನು ಅರ್ಧಕ್ಕೆ ಬಿಟ್ಟು ಬಂದವರಲ್ಲ. ಒಂದು ವೇಳೆ ಈ ಪಂದ್ಯ ಸೋತಿದ್ದರೆ ಅವರಷ್ಟು ಪಶ್ಚಾತ್ತಾಪ ಪಡುವವರು ಯಾರೂ ಇರುತ್ತಿರಲಿಲ್ಲ ಎಂದು ಪ್ರೀತಿ ಅಶ್ವಿನ್ ವಿವರಿಸಿದ್ದಾರೆ.