ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯದ ಬಳಿಕವಷ್ಟೇ ನೂತನ ಕೋಚ್ ಯಾರೆಂದು ಪ್ರಕಟಿಸಲಾಗುತ್ತದೆ ಎಂದು ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಹೇಳಿದ್ದಾರೆ.
ಮುಂಬೈನಲ್ಲಿ ಬಿಸಿಸಿಐನ ಪ್ರಧಾನ ಕಚೇರಿಯಲ್ಲಿ ನಡೆದ ಕೋಚ್ ಆಕಾಂಕ್ಷಿಗಳ ಸಂದರ್ಶನದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೌರವ್ ಗಂಗೂಲಿ ಅವರು, ಪ್ರಸ್ತುತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಅವರು ಭಾರತಕ್ಕೆ ಬಂದ ಬಳಿಕ ಕೋಚ್ ವಿಚಾರವಾಗಿ ಚರ್ಚಿಸಿ ಅವರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ನೂತನ ಕೋಚ್ ಆಯ್ಕೆ ಕುರಿತಂತೆ ನಿರ್ಧರಿಸುವುದಾಗಿ ಹೇಳಿದ್ದಾರೆ. ಆದರೆ ಕೋಚ್ ಆಯ್ಕೆ ಕುರಿತಂತೆ ನಿಖರ ದಿನಾಂಕ ಪ್ರಕಟಿಸಲು ಸಾಧ್ಯವಿಲ್ಲ ಎಂದೂ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಕೋಚ್ ಆಕಾಂಕ್ಷಿಗಳ ಸಂದರ್ಶನ ವೇಳೆ ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಟಾಮ್ ಮೂಡಿ, ಹಾಲಿ ಆಫ್ಘಾನಿಸ್ತಾನ ತಂಡದ ಕೋಚ್ ಲಾಲ್ ಚಂದ್ ರಜಪೂತ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ಕೋಚ್ ಮತ್ತು ನಿರ್ದೇಶಕರಾದ ರಿಚರ್ಡ್ ಫೈಬಸ್ ಅವರನ್ನು ಸಂದರ್ಶನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.