ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ವಿಭಾಗದಲ್ಲಿ ನೇಪಾಳ ಟಿ20 ಮಾದರಿಯಲ್ಲಿ ದಾಖಲೆಯ ಮೊತ್ತ ಪೇರಿಸಿದ್ದಲ್ಲದೆ, ನೇಪಾಳ ಬ್ಯಾಟಿಗ ದೀಪೇಂದ್ರ ಸಿಂಗ್ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರ ದಾಖಲೆ ಪುಡಿಗಟ್ಟಿದ್ದಾರೆ.
ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ನೇಪಾಳ 20 ಓವರ್ ಗಳಲ್ಲಿ ದಾಖಲೆಯ 314 ರನ್ ಗಳಿಸಿತು. ಇದಕ್ಕೆ ಮೊದಲು ಟಿ20 ಕ್ರಿಕೆಟ್ ನಲ್ಲಿ ಅಫ್ಘಾನಿಸ್ತಾನ, ಐರ್ಲೆಂಡ್ ತಂಡದ ವಿರುದ್ಧ ದಾಖಲಿಸಿದ್ದ 278 ರನ್ ಅತ್ಯಧಿಕ ರನ್ ದಾಖಲೆಯಾಗಿತ್ತು. ಆದರೆ ನೇಪಾಳ ಈಗ ಹೊಸ ದಾಖಲೆ ಸೃಷ್ಟಿಸಿದೆ.
ಬ್ಯಾಟಿಗ ದೀಪೇಂದ್ರ ಸಿಂಗ್ ಕೇವಲ 9 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಯುವರಾಜ್ ಸಿಂಗ್ ರ ಟಿ20 ಕ್ರಿಕೆಟ್ ನ ವೇಗದ ಅರ್ಧಶತಕ ದಾಖಲೆ ಅಳಿಸಿದ್ದಾರೆ. ಯುವರಾಜ್ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ನೇಪಾಳದ ಇನ್ನೊಬ್ಬ ಬ್ಯಾಟಿಗ ಕುಶಾಲ್ ಮಲ್ಲ 34 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಟಿ20 ಕ್ರಿಕೆಟ್ ನ ವೇಗದ ಶತಕ ದಾಖಲೆ ಮಾಡಿದರು. ಇದಕ್ಕೆ ಮೊದಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ದ.ಆಫ್ರಿಕಾದ ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ ಶತಕ ಗಳಿಸಿದ್ದು ದಾಖಲೆಯಾಗಿತ್ತು.
ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿರುವ ಕ್ರೀಡಾಂಗಣ ಅತೀ ಚಿಕ್ಕದಾಗಿದ್ದು, ಈಗಾಗಲೇ ಕೆಲವು ಮಾಜಿ ಕ್ರಿಕೆಟಿಗರು ಹಲವು ದಾಖಲೆಗಳಾಗುವುದು ಖಚಿತ ಎಂದು ಭವಿಷ್ಯ ನುಡಿದಿದ್ದರು. ಭಾರತ ತಂಡ ಅಕ್ಟೋಬರ್ 3 ರಂದು ಕ್ವಾರ್ಟರ್ ಫೈನಲ್ ಪಂದ್ಯವಾಡಲಿದೆ.