ದುಬೈ: ಏಷ್ಯಾ ಕಪ್ ಕ್ರಿಕೆಟ್ ಕೂಟದ ಮತ್ತೊಂದು ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ ಇಂದು ಶ್ರೀಲಂಕಾ ವಿರುದ್ಧ ಪಂದ್ಯವಾಡಲಿದೆ.
ಈಗಾಗಲೇ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿರುವುದು ಬೌಲಿಂಗ್. ಬ್ಯಾಟಿಂಗ್ ಗೆ ಹೋಲಿಸಿದರೆ ಬೌಲಿಂಗ್ ದುರ್ಬಲವಾಗಿದೆ. ಕಳೆದ ಪಂದ್ಯದಲ್ಲಿ ಜ್ವರದಿಂದ ತಂಡದಿಂದ ಹೊರಗುಳಿದಿದ್ದ ಆವೇಶ್ ಖಾನ್ ಇಂದು ಮರಳುವ ಸಾಧ‍್ಯತೆಯಿದೆ. ಹೀಗಾದಲ್ಲಿ ದೀಪಕ್ ಹೂಡಾ ಹೊರಗುಳಿಯಬಹುದು. ಪಾಕ್ ವಿರುದ್ಧದ ಪಂದ್ಯದಲ್ಲಿ ಪ್ರಮುಖ ಬೌಲರ್ ಗಳೇ ದುಬಾರಿಯಾಗಿದ್ದು ಭಾರತವನ್ನು ಸಂಕಷ್ಟಕ್ಕೀಡು ಮಾಡಿತ್ತು. ಜೊತೆಗೆ ಉತ್ತಮ ಆರಂಭ ಪಡೆದರೆ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲವಾಗುತ್ತಿರುವ ಬ್ಯಾಟಿಗರು ತಮ್ಮ ಹುಳುಕು ಸರಿಪಡಿಸಿಕೊಳ್ಳಬೇಕಾಗಿದೆ.
ಇತ್ತ ಶ್ರೀಲಂಕಾ ಇತ್ತೀಚೆಗೆ ತವರಿನಲ್ಲಿ ನಡೆದಿದ್ದ ಸರಣಿಯಲ್ಲಿ ಭಾರತ ವಿರುದ್ಧ ಸೋತಿತ್ತು. ಹಾಗಿದ್ದರೂ ಏಷ್ಯಾ ಕಪ್ ನಲ್ಲಿ ಸೂಪರ್ ಫೋರ್ ಹಂತದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆದ್ದಿರುವ ಲಂಕಾ ಉತ್ಸಾಹದಲ್ಲಿದೆ. ಆದರೆ ಭಾರತ ಲಂಕನ್ನರಿಗೆ ಕಠಿಣ ಎದುರಾಳಿಯಾಗಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.