ಮುಂಬೈ : ಕರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಆಯಂಟಿ ರೇಬಿಸ್ ಲಸಿಕೆ ನೀಡಿರುವ ಎಡವಟ್ಟು ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಆ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ನನ್ನು ಅಮಾನತು ಮಾಡಲಾಗಿದೆ. ಇಂಥದ್ದೊಂದು ಎಡವಟ್ಟು ಮಾಡಿರುವುದು ಕಲ್ವಾದಲ್ಲಿರುವ ಸರ್ಕಾರಿ ಮೆಡಿಕಲ್ ಸೆಂಟರ್ನಲ್ಲಿ. ರಾಜಕುಮಾರ್ ಯಾದವ್ ಎನ್ನುವವರು ಕರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದರು.
ಆದರೆ ಅಲ್ಲಿ ರೇಬಿಸ್ ಲಸಿಕೆಯೂ ನಡೆಯುತ್ತಿದ್ದರಿಂದ ಆ ಕ್ಯೂನಲ್ಲಿ ಅವರು ನಿಂತಿದ್ದರು. ಅವರು ಲಸಿಕೆ ಹಾಕಿಸಿಕೊಳ್ಳಲು ಬಂದಾಗ ಅವರಿಂದ ಏನನ್ನೂ ಕೇಳದ ವೈದ್ಯರು ರೇಬಿಸ್ ಲಸಿಕೆಯೇ ಹಾಕಿಸಿಕೊಳ್ಳಲು ಬಂದಿದ್ದಾರೆ ಎಂದು ಅದನ್ನೇ ಹಾಕಿದ್ದಾರೆ.
ನಂತರ ಎರಡನೆಯ ಲಸಿಕೆ ಹಾಕಿಸಿಕೊಳ್ಳಲು ಯಾವಾಗ ಬರಬೇಕು ಎಂದು ಯಾದವ್ ಕೇಳಿದಾಗಲೇ ವೈದ್ಯರಿಗೆ ತಿಳಿದದ್ದು ಅವರು ಬಂದಿದ್ದು ಕರೊನಾ ಲಸಿಕೆ ಹಾಕಿಸಿಕೊಳ್ಳಲು ಎಂದು. ಕೂಡಲೇ ಅವರು ರೇಬಿಸ್ ಲಸಿಕೆ ನೀಡಿರುವ ವಿಷಯ ಹೇಳಿದ್ದಾರೆ.
ಇದರಿಂದ ಅವರು ವೈದ್ಯರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಯಾದವ್ ಅವರು ಆರೋಗ್ಯದಿಂದಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಆದರೆ ಯಾವ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆ ಎಂಬುದನ್ನು ವಿಚಾರಿಸದೆ ನಿರ್ಲಕ್ಷ್ಯ ತೋರಿದ್ದಕ್ಕೆ ವೈದ್ಯರನ್ನು ಅಮಾನತು ಮಾಡಲಾಗಿದೆ ಎಂದು ಆಸ್ಪತ್ರೆ ಹೇಳಿದೆ. ಯಾದವರರ ಅವರು ತಪ್ಪಾಗಿ ಬೇರೆ ಕ್ಯೂನಲ್ಲಿ ನಿಂತಿದ್ದರಿಂದ ಈ ರೀತಿ ತಪ್ಪಾಗಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯುವುದಿಲ್ಲ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ಭರವಸೆ ನೀಡಿದ್ದಾರೆ.