ಧಾರವಾಡ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆ ಜಿಲ್ಲೆಗೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಮುಂಜಾಗೃತೆ ಕ್ರಮ ವಹಿಸುತ್ತಿದ್ದಾರೆ.
ಕೋವಿಡ್ 19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ಜನತಾ ಕರ್ಫ್ಯೂಗೆ ಉತ್ತರಕನ್ನಡ ಜಿಲ್ಲೆಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಜಿಲ್ಲಾ ಕೇಂದ್ರ ಕಾರವಾರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಸಾರಿಗೆ ವ್ಯವಸ್ಥೆ ಬೆಳಗ್ಗೆಯಿಂದಲೇ ಸಂಪೂರ್ಣವಾಗಿ ಬಂದ್ ಆಗಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ರಿಕ್ಷಾ, ಟೆಂಪೋ ಸೇರಿದಂತೆ ಯಾವುದೇ ವಾಹನಗಳ ಓಡಾಟ ಇರಲಿಲ್ಲ. ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಯಾವುದೇ ವಾಹನಗಳ ಓಡಾಟವಿಲ್ಲದೇ ಭಣಗುಡುತ್ತಿದ್ದವು. ಒಟ್ಟಾರೆ ಜಿಲ್ಲೆಯ ಜನತೆ ತಮ್ಮ ಮನೆಯಿಂದ ಹೊರಬರದೇ ಜನತಾ ಕರ್ಫ್ಯೂಗೆ ಬೆಂಬಲ ಘೋಷಿಸಿದ್ದರು.
ಧಾರವಾಡ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆ ಜಿಲ್ಲೆಗೆ ಹೊಂದಿಕೊಂಡಿರುವ ಹಳಿಯಾಳ, ಮುಂಡಗೋಡ ಹಾಗೂ ಯಲ್ಲಾಪುರ ಗಡಿಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ನಿಯೋಜನೆ ಸೇರಿದಂತೆ ಅನೇಕ ಕಟ್ಟೆಚ್ಚರ ಕ್ರಮ ಕೈಗೊಳ್ಳಲಾಗಿದೆ.