ಮುಂಬೈ : ನಟ ಸಂಜಯ್ ದತ್ ಅವರ ಜೀವನಾಧಾರಿತ ಸಿನಿಮಾ 'ಸಂಜು' ಈಗಾಗಲೇ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಈ ಸಿನಿಮಾದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದೆ.
ಈ ವಿಚಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ಪತ್ರಿಕೆ ಪಾಂಚಜನ್ಯದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಬರೆದಿರುವುದನ್ನು ನೋಡಿದಾಗ ಸ್ಪಷ್ಟವಾಗಿ ಅರ್ಥವಾಗುತ್ತದೆ. ಏಕೆಂದರೆ ಪತ್ರಿಕೆಯ ಮುಖಪುಟದಲ್ಲಿ 'ಕಿರ್ದಾರ್ ದಾಗ್ದಾರ್' ಎಂಬ ತಲೆ ಬಹರ ನೀಡಿರುವ ಈ ಲೇಖನದಲ್ಲಿ ಮುಂಬೈನ ಸಿನಿಮಾ ಉದ್ಯಮದ ಮಾಫಿಯಾ ಹಾಗೂ ಭೂಗತಲೋಕವನ್ನು ಎತ್ತಿಹಿಡಿಯುವ ಸಿನಿಮಾಗಳನ್ನು ಮಾಡಲು ಯಾಕೆ ಅವಕಾಶ ಮಾಡಿಕೊಡುತ್ತಾರೆ ಎಂದು ಬರೆದಿದ್ದಾರೆ.
‘ಈ ಸಿನಿಮಾದಲ್ಲಿ 1993 ಮುಂಬೈ ಬಾಂಬ್ ಸ್ಫೋಟದಲ್ಲಿ ಜೈಲಿಗೆ ಹೋಗಿದ್ದ ಸಂಜಯ್ ದತ್ ಬಗ್ಗೆ ತುಂಬಾ ಒಳ್ಳೆಯ ಭಾವನೆ ಮೂಡುವಂತೆ ತೋರಿಸಲಾಗಿದೆ. ನಿರ್ದೇಶಕ ರಾಜ್ಕುಮಾರ್ ಹಿರಾನಿ ಹಿಂದೂ ವಿರೋಧಿ ಸಿನಿಮಾಗಳನ್ನು ತೆಗೆಯುತ್ತಾರೆ. ಅವರ ಹಿಂದಿನ 'ಪಿಕೆ' ಸಿನಿಮಾ ಸಹ ಹಿಂದೂ ವಿರೋಧಿಯಾಗಿತ್ತು. ಇದರಲ್ಲಿ ಕಂಳಂಕಿತರಾಗಿರುವ ಸಂಜಯ್ ದತ್ ಅವರ ಹೆಸರನ್ನು ಶುದ್ಧಗೊಳಿಸುವ ಪ್ರಯತ್ನ ಮಾಡಲಾಗಿದೆ ವಿನಃ ಸಂಜು ಅವರ ಸಾಕಷ್ಟು ತಪ್ಪು ಮತ್ತು ಕೆಟ್ಟ ಗುಣಗಳನ್ನು ಮರೆಮಾಚಲಾಗಿದೆ. ಸಂಜಯ್ ದತ್ ಯಾವ ಘನ ಕಾರ್ಯ ಮಾಡಿದ್ದಾರೆಂದು ಅವರ ಜೀವನಾಧಾರಿತ ಸಿನಿಮಾ ಮಾಡಲಾಗಿದೆ. ಹಿರಾನಿ ಈ ಸಿನಿಮಾದ ಮೂಲಕ ಯುವಜನರಿಗೆ ಒಬ್ಬ ರೋಲ್ ಮಾಡೆಲ್ ಅನ್ನು ಪರಿಚಯಿಸಿದ್ದಾರಾ’ ಎಂದು ಬರೆಯುವುದರ ಮೂಲಕ ಬೇಸರವನ್ನು ಹೊರಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ