ಮಾರ್ಚ್ 15 ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿರುವ ಆಲಿಯಾ ಉಡುಗೊರೆ ಸ್ವೀಕರಿಸುವ ಬದಲಾಗಿ ತಾವೇ ತಮ್ಮ ಸ್ಟಾಫ್ಗೆ ಉಡುಗೊರೆಯನ್ನು ನೀಡಿರುವುದು ತಿಳಿದುಬಂದಿದೆ. ವೆಬ್ಸೈಟ್ ಪ್ರಕಾರ ಆಲಿಯಾ ತಮ್ಮ ಜನ್ಮದಿನಕ್ಕೂ ಮೊದಲೇ ತಮ್ಮ ಡ್ರೈವರ್ ಸುನಿಲ್ ಮತ್ತು ಡೊಮೆಸ್ಟಿಕ್ ಹೆಲ್ಪ್ ಅನ್ಮೋಲ್ ಅವರಿಗೆ ತಲಾ 50 ಲಕ್ಷಗಳನ್ನು ನೀಡಿರುವುದು ತಿಳಿದುಬಂದಿದೆ. ಆಲಿಯಾ ತಾವು ನೀಡಿರುವ ಹಣದಿಂದ ಅವರು ಮುಂಬೈಯಲ್ಲಿ ಮನೆಯನ್ನು ಖರೀದಿಸಬೇಕು ಎಂದು ಬಯಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಸುನಿಲ್ ಮತ್ತು ಅನ್ಮೋಲ್ ಇಬ್ಬರೂ ಈಗಾಗಲೇ ಜುಹು ಗಲ್ಲಿ ಮತ್ತು ಖರ್ ದಂಡಾದಲ್ಲಿ ಮನೆಗಳನ್ನು ಬುಕ್ ಮಾಡಿರುವುದಾಗಿ ತಿಳಿದುಬಂದಿದೆ. ಕರಣ್ ಜೋಹರ್ ಅವರ ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರದ ತಮ್ಮ ಬಾಲಿವುಡ್ ಪ್ರವೇಶದಿಂದಲೂ ಜೊತೆಗಿರುವ ಇಬ್ಬರನ್ನೂ ಆಲಿಯಾ ತುಂಬಾ ಇಷ್ಟಪಡುವುದು ಕಂಡುಬರುತ್ತಿದೆ.
ತಮ್ಮ ಸ್ಟಾಫ್ಗೆ ಮನೆಯನ್ನು ಕೊಂಡುಕೊಳ್ಳಲು ಹಣ ಕೊಡುವುದರೊಂದಿಗೆ ಆಲಿಯಾ ತಮಗಾಗಿಯೂ ಸಹ ಜುಹುನಲ್ಲಿ ಅಪಾರ್ಟ್ಮೆಂಟ್ ಒಂದನ್ನು ಖರೀದಿಸಿದ್ದು, ಅದರ ಬೆಲೆ ಸುಮಾರು 13 ಕೋಟಿ ರೂಪಾಯಿಗಳು ಎನ್ನಲಾಗುತ್ತಿದೆ. ಆಲಿಯಾ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿರುವುದರಿಂದ ಈ ಮನೆಯನ್ನು ಆಫೀಸ್ ಜಾಗವಾಗಿ ಬಳಸುವುದಾಗಿ ಹೇಳಿದ್ದಾರೆ. ಆಲಿಯಾ ತಮ್ಮ ಬ್ಯಾನರ್ಗೆ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ ಎಂದು ಹೆಸರಿಟ್ಟಿದ್ದಾರೆ.