ಸಾಂಪ್ರದಾಯಿಕ ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ವರ್ಜ್ಯ. ಯಾಕೆ?
ಮನೆಯಲ್ಲಿ ಹಬ್ಬ-ಹರಿದಿನ, ಪೂಜೆ, ಹವನ ಮುಂತಾದ ದೇವತಾಕಾರ್ಯಗಳಿರುವಾಗ ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ. ಅದಕ್ಕೊಂದು ಪೌರಾಣಿಕ ಹಿನ್ನಲೆಯಿದೆ.
ಸಮುದ್ರ ಮಥನದ ನಂತರ ಮೋಹಿನಿಯ ವೇಷ ಧರಿಸಿ ವಿಷ್ಣು ಸುರರಿಗೆ ಅಮೃತವನ್ನು ಹಂಚುತ್ತಿರುತ್ತಾನೆ. ಅದನ್ನು ಅರಿತ ರಾಹು ಕೇತುವೆಂಬ ರಾಕ್ಷಸರು ಅಮೃತವನ್ನು ಸ್ವೀಕರಿಸಲು ಬರುತ್ತಾರೆ. ಪ್ರಮಾದದಿಂದ ವಿಷ್ಣು ಅವರಿಗೂ ಅಮೃತ ಹಂಚುತ್ತಾನೆ. ತಕ್ಷಣದಲ್ಲೇ ಸೂರ್ಯ ಹಾಗೂ ಚಂದ್ರರು ಮಹಾವಿಷ್ಣುವಿಗೆ ಮಾಹಿತಿ ನೀಡುತ್ತಾರೆ.
ಅಷ್ಟರಲ್ಲಿ ಅವರಿಬ್ಬರಿಗೂ ಅಮೃತ ಕುಡಿದಾಗಿರುತ್ತದೆ. ಆದರೆ ಗಂಟಲಿನಿಂದ ಇಳಿದಿರುವುದಿಲ್ಲ. ಕೂಡಲೇ ಮಹಾವಿಷ್ಣು ಅವರಿಬ್ಬರ ತಲೆ ಕಡಿಯುತ್ತಾನೆ. ಆದರೆ ತಲೆ ನಾಶವಾಗುವುದಿಲ್ಲ. ದೇಹಾಂತ್ಯವಾಗುತ್ತದೆ. ಹೀಗಾಗಿ ಇವರಿಬ್ಬರಿಗೂ ಶಿರವಿಲ್ಲ. ಅವರ ಶಿರ ಕತ್ತರಿಸುವಾಗ ಅವರ ಬಾಯಲ್ಲಿದ್ದ ಅಮೃತ ಬಿಂದುವಿನಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿ ಹುಟ್ಟಿಕೊಂಡವು.
ಹೀಗಾಗಿ ಇವೆರಡು ಪದಾರ್ಥಗಳಿಗೆ ಅಮೃತದಂತೆ ಹಲವು ರೋಗಗಳನ್ನು ನಿವಾರಿಸುವ ಗುಣವಿದೆ. ಆದರೆ ರಾಕ್ಷಸರ ಎಂಜಲು ತಾಗಿದ್ದರಿಂದ ದುರ್ವಾಸನೆ ಹೊಂದಿದೆ. ಹೀಗಾಗಿ ಇವೆರಡೂ ಶುಭ ಕಾರ್ಯಗಳಲ್ಲಿ ವರ್ಜ್ಯವಾಗಿದೆ. ಇದನ್ನು ತಾಮಸ ಆಹಾರ ಎನ್ನಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.