ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ವೃತ್ತಿರಂಗದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಅವಕಾಶ ಸಿಕ್ಕಾಗ ಸದುಪಯೋಗಪಡಿಸಿಕೊಳ್ಳಿ. ಹೊಂದಾಣಿಕೆಯ ಸ್ವಭಾವವಿದ್ದರೆ ಸಾಂಸಾರಿಕವಾಗಿ ಸಾಮರಸ್ಯಕ್ಕೆ ಕೊರತೆಯಿರದು. ಅನಗತ್ಯ ವಿಚಾರಕ್ಕೆ ಚಿಂತೆ ಬೇಡ.
ವೃಷಭ: ಕೆಳ ಹಂತದ ನೌಕರರಿಗೆ ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ಆರ್ಥಿಕವಾಗಿ ಧನಗಳಿಕೆಗೆ ನಾನಾ ಮಾರ್ಗಗಳನ್ನು ಹುಡುಕಲಿದ್ದೀರಿ. ಕೆಟ್ಟ ಸ್ನೇಹಿತರ ಸಂಗದಿಂದ ದೂರವಿರುವುದು ಉತ್ತಮ. ಮಹಿಳೆಯರಿಗೆ ಬಿಡುವಿಲ್ಲದ ದುಡಿಮೆ.
ಮಿಥುನ: ಸಾಂಸಾರಿಕವಾಗಿ ಬಂಧುಮಿತ್ರರ ಸಮಾಗಮದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಮಕ್ಕಳ ಬಹುದಿನಗಳ ಬೇಡಿಕೆ ಪೂರೈಸಲಿದ್ದೀರಿ. ಯಂತ್ರೋಪಕರಣಗಳ ಕೆಲಸ ಮಾಡುವವರಿಗೆ ಹಿನ್ನಡೆಯಾದೀತು. ತಾಳ್ಮೆಯಿರಲಿ.
ಕರ್ಕಟಕ: ಸರಿಯಾದ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಅಂಜಬೇಕಾಗಿಲ್ಲ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿವೆ. ವೃತ್ತಿರಂಗದಲ್ಲಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.
ಸಿಂಹ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ಪರಿಹಾರವಾಗಲಿದೆ. ನೂತನ ವಸ್ತು ಖರೀದಿ ಮಾಡಲಿದ್ದೀರಿ. ಆರ್ಥಿಕವಾಗಿ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲಿದ್ದೀರಿ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳು.
ಕನ್ಯಾ: ನಿಮ್ಮ ವೃತ್ತಿಪರತೆಯಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಸಾಮಾಜಿಕವಾಗಿ ಕೀರ್ತಿ ಸಂಪಾದಿಸಲಿದ್ದೀರಿ. ಆದರೆ ದೇಹಾರೋಗ್ಯ ಚಿಂತೆಗೆ ಕಾರಣವಾದೀತು. ಸಂಗಾತಿಯು ನಿಮ್ಮ ಕಷ್ಟಗಳಿಗೆ ಹೆಗಲು ಕೊಡಲಿದ್ದಾರೆ.
ತುಲಾ: ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳುವ ಸ್ಥಿತಿ ನಿಮ್ಮದಾಗಲಿದೆ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ಬಾರದಂತೆ ಎಚ್ಚರಿಕೆ ವಹಿಸಿ. ಪ್ರಮುಖ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಕಾರ್ಯಸಾಧನೆಯಾಗಲಿದೆ.
ವೃಶ್ಚಿಕ: ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ವ್ಯಾಪಾರಿಗಳಿಗೆ ನಷ್ಟದ ಭೀತಿ ಎದುರಾಗಲಿದೆ. ಕ್ರಿಯಾತ್ಮಕವಾಗಿ ಯೋಚನೆ ಮಾಡಬೇಕಿದೆ.
ಧನು: ನಿಮ್ಮ ಕೋಪತಾಪಗಳನ್ನು ನಿಯಂತ್ರಣಕ್ಕೆ ತಾರದೇ ಇದ್ದರೆ ಕೌಟುಂಬಿಕ ಸಾಮರಸ್ಯ ತಪ್ಪಲಿದೆ. ಹಠ ಸಾಧನೆಗೆ ಇದು ಸೂಕ್ತ ಸಮಯವಲ್ಲ. ಸಂಗಾತಿಯ ಹಿತ ಮಾತುಗಳನ್ನು ಪಾಲಿಸಿದರೆ ಉತ್ತಮ. ಕುಲದೇವರ ಪ್ರಾರ್ಥನೆ ಮಾಡಿ.
ಮಕರ: ನಿಮ್ಮ ಕೆಲವೊಂದು ನಿರ್ಧಾರಗಳು ಪ್ರೀತಿ ಪಾತ್ರರ ಅಸಮಾಧಾನಕ್ಕೆ ಕಾರಣವಾದೀತು. ವೈಯಕ್ತಿಕವಾಗಿ ದೇಹಾರೋಗ್ಯದ ಬಗ್ಗೆ ಅನಾದರಣೆ ಬೇಡ. ರಾಜಕೀಯ ರಂಗದಲ್ಲಿರುವವರಿಗೆ ಶತ್ರುಪೀಡೆ ಕಂಡುಬಂದೀತು.
ಕುಂಭ: ಅವಿವಾಹಿತರಿಗೆ ಶೀಘ್ರ ಕಂಕಣ ಭಾಗ್ಯ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾದೀತು. ಹೊಸ ಜನರ ಭೇಟಿಯಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮೀನ: ಕಳೆದು ಹೋದ ಸಂಬಂಧಗಳನ್ನು ಮರಳಿ ಪಡೆಯುವ ಮನಸ್ಸಾಗಲಿದೆ. ಕೋರ್ಟು ಕಚೇರಿ ವ್ಯವಹಾರಗಳನ್ನು ಮುಂದೂಡಬೇಕಾಗುತ್ತದೆ. ಮಹಿಳೆಯರಿಗೆ ಹಿರಿಯರಿಂದ ಬಂದ ಬಳುವಳಿ ಸಂರಕ್ಷಿಸುವ ಜವಾಬ್ಧಾರಿ ಹೆಗಲಿಗೇರಲಿದೆ.