ಬೆಂಗಳೂರು: ಯಾವುದೇ ಪೂಜೆಯಿರಲಿ, ಹಬ್ಬ ಹರಿದಿನವಿರಲಿ, ಪೂಜೆ ಮಾಡಿದ ಮೇಲೆ ದೇವರ ಪ್ರಸಾದ ಸಿಕ್ಕೇ ಸಿಗುತ್ತದೆ. ದೇವರ ಪ್ರಸಾದವನ್ನು ಸ್ವೀಕರಿಸುವ ವಿಚಾರದಲ್ಲೂ ಕೆಲವೊಂದು ನಿಯಮ ಪಾಲಿಸಬೇಕು. ಏನು ಇಲ್ಲಿ ನೋಡಿ.
ದೇವರ ಪೂಜೆ ಮಾಡಿದಷ್ಟೇ ಭಕ್ತಿಯಿಂದ ದೇವರ ಪ್ರಸಾದವನ್ನೂ ಸ್ವೀಕರಿಸಬೇಕು. ಪ್ರಸಾದವನ್ನು ಸ್ವೀಕರಿಸುವಾಗ ಸರಿಯಾದ ಕ್ರಮದಲ್ಲಿ ಸ್ವೀಕರಿಸಿದರೆ ಅದರ ಫಲ ನಮಗೆ ಸಿಗುತ್ತದೆ. ಅದು ಮಂಗಳಕರವಾಗಿರುತ್ತದೆ. ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂಬ ನಂಬಿಕೆಯಿದೆ.
ದೇವರ ಪ್ರಸಾದ ಅತ್ಯಂತ ಪವಿತ್ರವಾಗಿದ್ದು ಅದನ್ನು ಕಣ್ಣಿಗೊತ್ತಿಕೊಂಡು ಸೇವಿಸಬೇಕು. ದೇವರ ಪ್ರಸಾದವನ್ನು ಸ್ವೀಕರಿಸುವಾಗ ಉತ್ತರ ಮತ್ತು ಪೂರ್ವ ದಿಕ್ಕಿಗೆ ಕೂತು ಸ್ವೀಕರಿಸಿದರೆ ಅತ್ಯಂತ ಶ್ರೇಯಸ್ಕರವಾಗಿರುತ್ತದೆ. ಈ ದಿಕ್ಕಿನಲ್ಲಿ ಕೂತು ಪ್ರಸಾದವನ್ನು ಸ್ವೀಕರಿಸುವುದರಿಂದ ಮನೆಯಲ್ಲಿ ಸಮೃದ್ಧಿಯುಂಟಾಗುತ್ತದೆ.
ಆದರೆ ದೇವರ ಪ್ರಸಾದವನ್ನು ಅಪ್ಪಿ ತಪ್ಪಿಯೂ ದಕ್ಷಿಣ ದಿಕ್ಕಿಗೆ ಕೂತು ಸ್ವೀಕರಿಸಬೇಡಿ. ದಕ್ಷಿಣ ದಿಕ್ಕು ಯಮನ ದಿಕ್ಕು. ದೇವರ ಪ್ರಸಾದವಾಗಲೀ, ಅನ್ನವಾಗಲೀ ದಕ್ಷಿಣ ದಿಕ್ಕಿಗೆ ಕೂತು ಸೇವಿಸುವುದರಿಂದ ಆಯಸ್ಸು ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಜೊತೆಗೆ ಮನೆಯಲ್ಲಿಯೂ ದುರಾದೃಷ್ಟ ತಾಂಡವವಾಡುತ್ತದೆ.