ಬೆಂಗಳೂರು: ಇಂದು ಸೂರ್ಯಗ್ರಹಣವಾಗಲಿದ್ದು, ಭಾರತದಲ್ಲಿ ಇದು ಗೋಚರವಾಗುವುದಿಲ್ಲವಾದರೂ ಇದರ ಫಲ ಕೆಲವೊಂದು ರಾಶಿಯವರಿಗೆ ಇರಲಿದೆ. ಅದರ ಮಾಹಿತಿ ಇಲ್ಲಿದೆ.
ಸೂರ್ಯ, ಚಂದ್ರ, ಕೇತುಗ್ರಹಗಳು ಕನ್ಯಾ ರಾಶಿಯಲ್ಲಿ ಸಂಗಮವಾಗುತ್ತಿದ್ದು ಸೂರ್ಯಗ್ರಹಣಕ್ಕೆ ಕಾರಣವಾಗುತ್ತಿದೆ. ಈ ಸೂರ್ಯ ಗ್ರಹಣ ಮಧ್ಯರಾತ್ರಿ ಸಂಭವಿಸಲಿದ್ದು, ಭಾರತದಲ್ಲಿ ಇದು ಗೋಚರವಾಗುವುದಿಲ್ಲ. ಹಾಗಿದ್ದರೂ ಕೆಲವೊಂದು ರಾಶಿಯವರ ಮೇಲೆ ಇದು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮ ಬೀರಲಿದೆ.
ಇಂದು ರಾತ್ರಿ ಭಾರತೀಯ ಕಾಲಮಾನ ಪ್ರಕಾರ 9.13 ಕ್ಕೆ ಆರಂಭವಾಗಲಿರುವ ಗ್ರಹಣ ಬೆಳಗಿನ ಜಾವ 3.17 ಕ್ಕೆ ಮೋಕ್ಷವಾಗಲಿದೆ. ಹೀಗಾಗಿ ಭಾರತದಲ್ಲಿ ಈ ಗ್ರಹಣ ವೀಕ್ಷಣೆ ಮಾಡಲು ಸಾಧ್ಯವಿಲ್ಲ.
ಇಂದಿನ ಗ್ರಹಣವು ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ ರಾಶಿಯವರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ವೃಷಭ ರಾಶಿಯವರು ಏಕಾಗ್ರತೆ ಕಳೆದುಕೊಳ್ಳುವುದು, ಮಕ್ಕಳಲ್ಲಿ ವಿದ್ಯಾಭ್ಯಾಸಕ್ಕೆ ಹಿನ್ನಡೆ ಉಂಟಾಗಬಹುದು. ಮಿಥುನ ರಾಶಿಯವರಿಗೆ ವ್ಯವಹಾರದಲ್ಲಿ ತೊಂದರೆ, ಕನ್ಯಾ ರಾಶಿಯವರಿಗೆ ಮಾನಸಿಕವಾಗಿ ನೆಮ್ಮದಿ ಇಲ್ಲದೇ ಇರುವುದು, ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ತುಲಾ ರಾಶಿಯವರಿಗೆ ವಿವಾಹ, ಉದ್ಯೋಗ ಪ್ರಯತ್ನಕ್ಕೆ ಹಿನ್ನಡೆ, ಮಕರ ರಾಶಿಯವರಿಗೆ ಉದ್ಯೋಗದಲ್ಲಿ ತೊಂದರೆ, ಹಣಕಾಸಿನ ಸಮಸ್ಯೆ, ಮೀನ ರಾಶಿಯವರಿಗೆ ಪ್ರೇಮ ವೈಫಲ್ಯ, ವಿವಾಹ ಪ್ರಯತ್ನಕ್ಕೆ ಹಿನ್ನಡೆ ಇತ್ಯಾದಿ ಸಮಸ್ಯೆಗಳು ಬರಬಹುದು. ಹೀಗಾಗಿ ಈ ರಾಶಿಯವರು ತಪ್ಪದೇ ಗ್ರಹಣ ಕಾಲದಲ್ಲಿ ವಿಷ್ಣು ಸಹಸ್ರನಾಮ ಪಠಿಸುವುದು ಉತ್ತಮ.