ಬೆಂಗಳೂರು: ದಿವಂಗತರಾದ ನಮ್ಮ ಹಿರಿಯರಿಗೆ ಶ್ರಾದ್ಧ ಕಾರ್ಯ ಮಾಡಿ, ಪಿಂಡ ಬಿಡುವ ಪದ್ಧತಿ ನಮ್ಮ ಹಿಂದೂ ಪರಂಪರೆಯಲ್ಲಿದೆ. ಆದರೆ ಪಿಂಡ ಬಿಡುವುದು ಯಾಕೆ? ಇದರಿಂದ ಹಿರಿಯರು ಹೇಗೆ ಸಂತೃಪ್ತರಾಗುತ್ತಾರೆ ಎಂದು ತಿಳಿದುಕೊಳ್ಳಿ. ಈ ಬಗ್ಗೆ ವೈದಿಕರು, ವೇದಮೂರ್ತಿ, ಶ್ರೀ ವೆಂಕಟರಮಣ ಭಟ್ ಅವರ ವಿವರಣೆ ಇಲ್ಲಿದೆ.
ಶ್ರಾದ್ಧ ಎನ್ನುವುದು ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದೆ. ಯಾಕೆಂದರೆ ಇಲ್ಲಿ ನಮ್ಮ ಬೇಡಿಕೆ ಏನೂ ಇಲ್ಲದೇ ನಿಸ್ವಾರ್ಥವಾಗಿ ಸಂಕಲ್ಪ ಮಾಡಿಕೊಂಡು ಮಾಡಿಕೊಂಡು ನಮ್ಮ ಹಿರಿಯರಿಗೆ ನಾವು ಮಾಡುವ ಸೇವೆ ಇದಾಗಿದೆ. ನಾವು ಮನೆಯಲ್ಲಿ ಒಂದು ಪೂಜೆ-ಪುನಸ್ಕಾರಗಳನ್ನು ಮಾಡುವಾಗ ದೇವರಲ್ಲಿ ಏನಾದರೊಂದು ಬೇಡಿಕೆ ಸಲ್ಲಿಸಿಕೊಡುವಂತೆ ಸಂಕಲ್ಪ ಮಾಡುತ್ತೇವೆ. ಆದರೆ ಶ್ರಾದ್ಧ ಕಾರ್ಯದಲ್ಲಿ ನಾವು ನಮಗಾಗಿ ಏನೊಂದೂ ಬೇಡಿಕೊಳ್ಳದೇ ಪಿತೃ ಪ್ರೀತ್ಯರ್ಥಂ ಎಂದು ನಿಸ್ವಾರ್ಥವಾಗಿ ಸಂಕಲ್ಪ ಮಾಡಿ ಮಾಡುವ ಕಾರ್ಯವಾಗಿದೆ. ದೇವರ ಅನುಗ್ರಹ ನಮಗೆ ಸಿಗಬೇಕು ಎಂದಾದರೆ ನಾವು ಪಿತೃ ಕರ್ಮ ಮಾಡಲೇಬೇಕು. ಪಿತೃ ಕರ್ಮ ಮಾಡದೇ ಇದ್ದರೂ ದೇವತಾ ಅನುಗ್ರಹ ನಮಗೆ ಸಿಗದು.
ಶ್ರಾದ್ಧ ಮಾಡುವಾಗ ಕೊನೆಯಲ್ಲಿ ಪಿಂಡ ಪ್ರಧಾನ ಮಾಡಲಾಗುತ್ತದೆ. ಇದು ವರ್ಷಕ್ಕೊಮ್ಮೆ ಸ್ವರ್ಗಸ್ಥರಾದ ನಮ್ಮ ಹಿರಿಯರಿಗೆ ನಾವು ಈ ಮೂಲಕ ಆಹಾರ ಸಲ್ಲಿಸುವ ಪದ್ಧತಿಯಾಗಿದೆ. ಆದರೆ ಇಲ್ಲಿ ಎಲ್ಲೋ ಪಿಂಡ ಇಟ್ಟರೆ ಸ್ವರ್ಗದಲ್ಲಿರುವ ನಮ್ಮ ಹಿರಿಯರಿಗೆ ಅದು ಹೇಗೆ ಸಲ್ಲಿಕೆಯಾಗುತ್ತದೆ ಎಂದು ನಮ್ಮೆಲ್ಲರಿಗೂ ಪ್ರಶ್ನೆ ಮೂಡಬಹುದು. ಆದರೆ ಒಂದು ವಿಚಾರವನ್ನು ನಾವು ಎಲ್ಲರೂ ನೆನಪಲ್ಲಿಟ್ಟುಕೊಳ್ಳಬೇಕು. ನಮ್ಮೆಲ್ಲರಲ್ಲೂ ಆ ಭಗವಾನ್ ಮಹಾವಿಷ್ಣುವಿನ ಅಂಶವಿದೆ. ಅವನಿಗೆ ಅದೇ ರೀತಿ ಅಲ್ಲಿ ಹಾಕಿದ ಪಿಂಡವು ನಮ್ಮ ಪಿತೃಗಳ ಆತ್ಮವು ಎಲ್ಲಿಯೇ ಇದ್ದರೂ, ಯಾವುದೇ ರೂಪದಲ್ಲಿದ್ದರೂ ಅದನ್ನು ಆ ಮಹಾವಿಷ್ಣು ಒದಗಿಸಿಕೊಡುತ್ತಾನೆ ಎನ್ನುವ ನಂಬಿಕೆ.
ಶ್ರಾದ್ಧದ ಕರ್ಮದಲ್ಲಿ ಪಿಂಡ ಪ್ರಧಾನ ಮಾಡುವಾಗ ನಾವು ಅದನ್ನು ಖಗಚರ, ಜಲಚರ, ಜೀವರಾಶಿಯವರಿಗೆ ಆ ಆಹಾರ ಸಿಗುತ್ತದೆ. ಬಲಿ ಬಾಳೆಯ ಮೂಲಕ ಖಗಚರಗಳಿಗೆ, ಪಿಂಡವನ್ನು ನೀರಿನಲ್ಲಿ ಬಿಟ್ಟಾಗ ಅದು ಜಲಚರಗಳಿಗೆ, ಅದೇ ಬ್ರಾಹ್ಮಣರಿಗೆ ಭೋಜನ ನೀಡುವಾಗ ನಿಮಗೆ ಇಷ್ಟಾರ್ಥಗಳೇನು ಎಂದು ಕೇಳಿಕೊಂಡು ಅದಕ್ಕೆ ತಕ್ಕಂತೆ ಊಟೋಪಚಾರ ಬಡಿಸುವ ಮೂಲಕ ಸಂತೃಪ್ತಗೊಳಿಸುತ್ತೇವೆ. ಅದೇ ರೀತಿ ಗೋವುಗಳಿಗೆ ಗ್ರಾಸ ಕೊಡುತ್ತೇವೆ. ಆ ಮೂಲಕವೂ ಆಹಾರ ಸೇರುತ್ತದೆ. ಆ ಮೂಲಕ ಈ ಎಲ್ಲರ ಪ್ರೀತ್ಯರ್ಥ ನೆರವೇರಿಸುವ ಮೂಲಕ ಪಿತೃಗಳು ತೃಪ್ತರಾಗುತ್ತಾರೆ ಎಂದು ನಮ್ಮ ಶಾಸ್ತ್ರ ಹೇಳುತ್ತದೆ.