ಬೆಂಗಳೂರು: ಪ್ರತಿಯೊಬ್ಬರ ಮನೆಯಲ್ಲಿ ಬೆಳಿಗ್ಗೆ ಅಥವಾ ಸಂಜೆ ದೇವರಿಗೆ ದೀಪ ಹಚ್ಚಿಡುವ ಸಂಪ್ರದಾಯ ಇದ್ದೇ ಇರುತ್ತದೆ. ಆದರೆ ಈ ರೀತಿ ದೀಪ ಹಚ್ಚಲು ಬಳಸಿದ ಬತ್ತಿಯನ್ನು ಯಾವ ರೀತಿ ಬಿಸಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಸಾಮಾನ್ಯವಾಗಿ ದೇವರ ಮುಂದಿನ ದೀಪದ ಬತ್ತಿಯನ್ನು ನಾಲ್ಕೈದು ದಿನಗಳ ಕಾಲ ಹಾಗೆಯೇ ಇಟ್ಟುಕೊಳ್ಳುವವರೂ ಇದ್ದಾರೆ. ಇದರ ಹೊರತಾಗಿ ಕೆಲವರು ಪ್ರತಿನಿತ್ಯ ದೀಪದ ಬತ್ತಿಯನ್ನು ಬದಲಾಯಿಸುತ್ತಾರೆ. ಇದು ಸರಿಯಾದ ಕ್ರಮ. ಆದರೆ ಒಮ್ಮೆ ಹಚ್ಚಿ ಆರಿಸಿದ ದೀಪದ ಬತ್ತಿಯನ್ನು ರಸ್ತೆ ಬದಿಯಲ್ಲೋ, ಕಸದ ಬುಟ್ಟಿಗೋ ಎಸೆಯುವುದು ಖಂಡಿತಾ ಒಳ್ಳೆಯದಲ್ಲ.
ಇದರಿಂದ ದೇವಿಯ ಅವಕೃಪೆಗೊಳಗಾಗಬೇಕಾಗುತ್ತದೆ. ಜೀವನದಲ್ಲಿ ಕಷ್ಟ-ನಷ್ಟ ಎದುರಿಸಬೇಕಾಗುತ್ತದೆ. ಅದರ ಹೊರತಾಗಿ ಬಳಸಿದ ದೀಪದ ಬತ್ತಿಯನ್ನು ಪೂಜೆಗೆ ಬಳಸಿದ ಹೂವಿನ ಜೊತೆ ನೀರಿನಲ್ಲಿ ಬಿಡುವುದು ಉತ್ತಮ ಕ್ರಮ. ಆದರೆ ಎಲ್ಲರಿಗೂ ಈ ಅನುಕೂಲವಿರುವುದಿಲ್ಲ.
ಅಂತಹವರು ಈ ರೀತಿ ಬಳಸಿ ಬಿಸಾಡುವ ದೀಪದ ಬತ್ತಿಯನ್ನು ಒಂದೆಡೆ ಸುರಕ್ಷಿತವಾಗಿ ಶೇಖರಿಸಿಡಬೇಕು. ಬಳಿಕ ವಾರವೋ, ಹತ್ತು ದಿನವೋ ಕಳೆದ ಮೇಲೆ ಎಲ್ಲವನ್ನೂ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ಕರ್ಪೂರ ಹಾಕಿ ಉರಿಸಿ ನಾಶ ಮಾಡಬಹುದು. ಇದು ಪದ್ಧತಿ ಪ್ರಕಾರ ಸರಿಯಾದ ಕ್ರಮವಾಗಿದೆ.