ಬೆಂಗಳೂರು: ಇಂದು ಗುರುವಾರವಾಗಿದ್ದು ದೇವಾದಿದೇವತೆಗಳಿಗೂ ಪ್ರಿಯನಾದ ಮಹಾವಿಷ್ಣುವಿನ ದಿನವಾಗಿದೆ. ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಬೇಕಾದರೆ ನಮ್ಮ ದೇವರ ಮನೆ ಪೂಜೆಯಲ್ಲಿ ಯಾವ ವಸ್ತುಗಳನ್ನಿಡಬೇಕು ನೋಡಿ.
ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದು ನಮ್ಮ ಮನೆಗೆ ಧನಾತ್ಮಕ ಪ್ರಭಾವ ಬೀರುತ್ತದೆ. ಸಮೃದ್ಧಿ, ಸುಖ, ಸಂಪತ್ತು, ಸಾಮರಸ್ಯ ಎಲ್ಲವೂ ವೃದ್ಧಿಯಾಗುತ್ತದೆ. ಯಾವ ಮನೆಯಲ್ಲಿ ಮಹಾವಿಷ್ಣುವನ್ನು ಗೌರವಿಸಲಾಗುತ್ತದೆಯೋ ಅಲ್ಲಿ ಲಕ್ಷ್ಮೀ ದೇವಿಯೂ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ.
ಸಾಮಾನ್ಯವಾಗಿ ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸಿದರೆ ಮಹಾವಿಷ್ಣುವನ್ನು ಸಾಲಿಗ್ರಾಮದ ರೂಪದಲ್ಲಿ ಪೂಜಿಸುತ್ತೇವೆ. ಮಹಾವಿಷ್ಣುವಿನ ಫೋಟೋ ಮತ್ತು ಆತನಿಗೆ ಪ್ರಿಯವಾದ ವಸ್ತುಗಳಿಗೆ ನಮ್ಮ ದೇವರ ಮನೆಯಲ್ಲಿ ವಿಶೇಷ ಸ್ಥಾನ ನೀಡಬೇಕು. ಇದರಿಂದ ಲಕ್ಷ್ಮಿ ಸದಾ ನಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ.
ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ನವಿಲು ಗರಿ, ಶಂಖ, ಗಂಗಾಜಲ, ತುಳಸಿ ಹಾರ, ಗೋಮೂತ್ರ, ಸಾಲಿಗ್ರಾಮ ಶಿಲೆಯನ್ನು ದೇವರ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಅದೇ ರೀತಿ ಮಹಾವಿಷ್ಣುವಿಗೆ ಈ ರೀತಿ ವಿಶೇಷ ಸ್ಥಾನ ನೀಡುವುದರಿಂದ ಲಕ್ಷ್ಮೀ ದೇವಿಯೂ ಅನುಗ್ರಹಿಸುತ್ತಾಳೆ ಎಂಬ ನಂಬಿಕೆಯಿದೆ.