ಬೆಂಗಳೂರು: ಪ್ರತಿಯೊಬ್ಬರ ಮನೆಯಲ್ಲಿಯೂ ದೇವರ ಕೋಣೆ ಇದ್ದೇ ಇರುತ್ತದೆ. ಇಲ್ಲಿ ದೇವರಿಗೆ ಸಂಬಂಧಪಟ್ಟ ವಸ್ತುಗಳನ್ನು ಇಟ್ಟುಕೊಳ್ಳಲಾಗುತ್ತದೆ. ಆದರೆ ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ನಿಷಿದ್ಧವಾಗಿದೆ.
ದೇವರ ಮನೆಯಲ್ಲಿ ಇಡುವ ವಸ್ತುಗಳು ದೇವರಿಗೆ ಪ್ರತಿನಿತ್ಯ ಪೂಜೆಗೆ ಅಗತ್ಯವಾದಂತಹ ವಸ್ತುಗಳು ಮಾತ್ರವೇ ಆಗಿರಬೇಕು. ಅದರ ಹೊರತಾಗಿ ಬೇಡದ ವಸ್ತುಗಳನ್ನು ತಂದು ತುಂಬಿಟ್ಟುಕೊಳ್ಳಬೇಡಿ. ನೆನಪಿರಲಿ, ನಮ್ಮ ಮನೆ ಜೊತೆಗೆ ನಮ್ಮ ದೇವರ ಮನೆ ಎಷ್ಟು ಶುಚಿಯಾಗಿಟ್ಟುಕೊಳ್ಳುತ್ತೇವೋ ಅಷ್ಟೇ ಯಶಸ್ಸು ನಮಗೆ ಸಿಗುತ್ತದೆ.
ಕೆಲವರು ದೇವರಿಗೆ ನೋಟುಗಳನ್ನಿಟ್ಟು ಪೂಜೆ ಮಾಡುತ್ತಾರೆ. ಆದರೆ ದೇವರ ಮನೆಯಲ್ಲಿ ಪೂಜೆ ಮಾಡಲು ಬಳಸುವ ಅಥವಾ ಯಾವುದೇ ಕಾರಣಕ್ಕೂ ಹರಿದ ನೋಟುಗಳನ್ನು ಇಡಬೇಡಿ. ಇದರಿಂದ ದಾರಿದ್ರ್ಯ ಉಂಟಾಗಬಹುದು. ಅದೇ ರೀತಿ ನವಿಲು ಗರಿಗಳನ್ನು ಇಟ್ಟುಕೊಂಡಲ್ಲಿ ಮನೆಯಲ್ಲಿ ಕಲಹಕ್ಕೆ ಕಾರಣವಾಗಬಹುದು.
ಕೆಲವರಿಗೆ ನಮ್ಮ ತೀರ್ಥರೂಪರು ದೇವರ ಸಮಾನರಾಗಿರುತ್ತಾರೆ. ಹಾಗಂತ ತೀರಿಕೊಂಡ ನಮ್ಮ ಹಿರಿಯರ ಫೋಟೋಗಳನ್ನು ದೇವರ ಮನೆಯಲ್ಲಿಟ್ಟುಕೊಂಡರೆ ಒಳಿತಾಗದು. ಅದೇ ರೀತಿ ತೆಂಗಿನ ಕಾಯಿ ಬಳಸುತ್ತಿದ್ದರೆ ನೀರಿಲ್ಲದ ಅಥವಾ ಹಾಳಾದ ತೆಂಗಿನ ಕಾಯಿಯನ್ನು ದೇವರ ಮನೆಯಲ್ಲಿಟ್ಟುಕೊಳ್ಳಬೇಡಿ.