ಇಂದು ಗಂಡ ಮನೆಯಲ್ಲಿಲ್ಲ… ಬೆಳಗ್ಗೆ ಬೇಗ ಕಾಫಿ, ತಿಂಡಿ ರೆಡಿ ಮಾಡಬೇಕೆಂಬ ಗಡಿಬಿಡಿಯಿಲ್ಲ. ಕಸ ಗುಡಿಸಿಲ್ಲವೆಂದು ಕೇಳುವವರಿಲ್ಲ.. ಬಟ್ಟೆಗೆ ಇಸ್ತ್ರಿ ಮಾಡಿ ಕೊಡುವ ಗೌಜಿಯಿಲ್ಲ. ಇನಿಯನಿಲ್ಲದ ದಿನ ಇವಳು ಅನುಭವಿಸುವ ಖುಷಿಯ ದಿನವದು..
ಯಾವತ್ತಿನ ಹಾಗೇ ಅಲರಾಂ ಕೂಗಿದರೂ, ಏಳಲೇಬೇಕೆಂಬ ಒತ್ತಡವಿಲ್ಲ. ಗೇಟಿನ ಬುಡದಲ್ಲಿ ಬಿದ್ದ ಪೇಪರ್ ಎತ್ತಿಕೊಂಡು ಬರಲೇ ಬೇಕೆಂದೇನಿಲ್ಲ. ಇವಳಿಗೆ ಮತ್ತೆ ಓದಿದರೂ ನಡೆಯುತ್ತದೆ. ಪಕ್ಕದ ಮನೆ ಸೀತಮ್ಮನೋ.. ಸಾವಿತ್ರಮ್ಮನೋ ಸಿಕ್ಕರೆ ಒಂದಷ್ಟು ಹೊತ್ತು ಹರಟೆ ಹೊಡೆಯಬಹುದು.
ಎಂಟು ಗಂಟೆ ಹೊಡೆಯುತ್ತಲೇ ತಿಂಡಿಯಾಗಿಲ್ಲ ಎಂದು ಹೊಟ್ಟೆ ಹೇಳಿದರೂ, ಮಾಡುವ ಮನಸ್ಸಿಲ್ಲ. ಯಾವತ್ತೂ ಇದ್ದಿದ್ದೇ.. ಪಕ್ಕದ ಅಯ್ಯಂಗಾರ್ ಟಿಫಿನ್ ನ ಕಾವಲಿಯಲ್ಲಿ ಚೊಂಯ್.. ಎಂದು ಸದ್ದು ಮಾಡುತ್ತಾ ಹುಯ್ಯುವ ದೋಸೆಯ ವಾಸನೆ ಅತ್ತ ಸೆಳೆಯುತ್ತದೆ. ಪರ್ಸ್ ಎತ್ತಿಕೊಂಡು ಯಾವುದೋ ಟಾಪ್ ಗೆ ಯಾವುದೋ ಪ್ಯಾಂಟ್ ಸುರಿದುಕೊಂಡು ಅತ್ತ ನಡೆದು ಹೊಟ್ಟೆ ತುಂಬಿಸಿಕೊಂಡರೆ ಸದ್ಯಕ್ಕಂತೂ ಹೊಟ್ಟೆಗೇನೂ ಬೇಡ.
ಹೇಗಿದ್ದರೂ ತಾನೊಬ್ಬಳೇ. ಯಾರಿಗಾಗಿ ಮನೆ ನೀಟಾಗಿ ಇಡಬೇಕು? ಯಾರಿಗಾಗಿ ನೀಟಾಗಿ ಅಲಂಕರಿಸಿಕೊಳ್ಳಬೇಕು? ಮತ್ತದೇ ಬೇಸರ. ಅಡುಗೆ ಮನೆ ಕಡೆ ತಪ್ಪಿಯೂ ಕಾಲು ಎಳೆಯುವುದಿಲ್ಲ. ಹಜಾರದ ಸೋಫಾದ ಮೇಲೆ ಮಲಗಿಕೊಂಡು ಟಿವಿ ಆನ್ ಮಾಡಿ ಬೇಕಾದ ಚಾನೆಲ್ ನೋಡುತ್ತಿದ್ದರೆ ಅದೆಂತಾ ಖುಷಿ?!
ಮಧ್ಯಾಹ್ನ ಊಟಕ್ಕೆ ಮೊನ್ನೆ ಸಿಕ್ಕಿದ್ದ ಗೆಳತಿ ಊಟಕ್ಕೆ ಕರೆದಿದ್ದಳಲ್ಲ? ಅವಳ ಮನೆಗೆ ಹೋದರಾಯಿತು. ರಾತ್ರಿಗೂ ಒತ್ತಾಯ ಮಾಡಿ ಅವಳೇ ಸಾಂಬಾರ್ ಕೊಡುತ್ತಾಳೆ. ಇಂದಿಡೀ ಒಲೆ ಹಚ್ಚುವ ಕೆಲಸವಿಲ್ಲ. ಅಮ್ಮನ ನಂಬರ್ ಗೆ ಬೇಡವೆಂದರೂ ಫೋನ್ ಡಯಲ್ ಆಗುತ್ತದೆ.
ರಾತ್ರಿಯಾಗುತ್ತಲೇ ನೆನಪಾಗುತ್ತದೆ. ಅರೇ.. ನಾಳೆ ಬೆಳಿಗ್ಗೆಯೇ ನನ್ನ ಪತಿರಾಯ ಬರುವನಲ್ಲ? ತಿಂಡಿ ಏನು ಮಾಡಲಿ? ಮನೆ ಗುಡಿಸಿಲ್ಲ! ಅವನ ಶರ್ಟ್ ಐರನ್ ಆಗಿಲ್ಲ.. ಕರೆಂಟ್ ಬಿಲ್ ಕಟ್ಟಲು ಹೇಳಿದ್ದ.. ಮಾಡಿಯೇ ಇಲ್ಲವಲ್ಲ… ತರಕಾರಿಯೇ ತಂದಿಲ್ಲ.. ಛೇ… ಇದೇನು ಮಾಡಿಬಿಟ್ಟೆ… ಮತ್ತದೇ ಬೆಳಗು.. ಗಡಿಬಿಡಿ,, ಕೆಲಸ.. ಒಂದೇ ದಿನಕ್ಕೆ ಮುಗಿಯೇ ನನ್ನ ದಿನ..?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.