ಋತುಮಾನಗಳು ಬದಲಾಗುತ್ತಲೇ ಇರುತ್ತದೆ, ಋತುಮಾನಗಳು ಯಾವುದೇ ಇರಲಿ, ಒಂದು ಸಾಮಾನ್ಯ ಸಮಸ್ಯೆ ಎಂದರೆ ತರಕಾರಿ ಮತ್ತು ಹಣ್ಣುಗಳು ತಾಜಾತನದಿಂದ ಇರುವಂತೆ ನೋಡಿಕೊಳ್ಳುವುದು ಮತ್ತು ತುಂಬಾ ದಿನ ಇರುವಂತೆ ನೋಡಿಕೊಳ್ಳುವುದು, ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ತರಕಾರಿ, ಹಣ್ಣುಗಳು ಮೂರು ಅಥವಾ ನಾಲ್ಕು ದಿನಗಳವರೆಗೆ ಇರುವಂತೆಯೇ ಖರೀದಿಸುತ್ತಾರೆ. ಆದರೆ ತರಕಾರಿ, ಹಣ್ಣುಗಳು ಬೇಗನೆ ಕೊಳೆಯುತ್ತವೆ.
ರೆಫ್ರಿಜರೇಟರ್ ಇದ್ದರೂ ಸಹ ಇದು ನೈಸರ್ಗಿಕವಾಗಿ ತುಂಬಾ ದಿನಗಳ ಕಾಲ ತರಕಾರಿ, ಹಣ್ಣುಗಳು ತಾಜಾವಾಗಿ ಇರುವಂತೆ ನೋಡಿಕೊಳ್ಳುವಲ್ಲಿ ವಿಫಲವಾಗುತ್ತದೆ. ರೆಫ್ರಿಜರೇಟರ್ ಇಲ್ಲದೇ ಕೊಳೆತು ಹಾಳಾಗುತ್ತದೆ.
ತಾಜಾತನವಿಲ್ಲದ ತರಕಾರಿಗಳಿಂದ ಅಡುಗೆ ಮಾಡಿದರೆ ರುಚಿಯೂ ಇರುವುದಿಲ್ಲ. ಅಲ್ಲದೇ ಹಣ್ಣುಗಳಲ್ಲಿ ದೇಹಕ್ಕೆ ಬೇಕಾದ ಜೀವಸತ್ವಗಳು ಸತ್ತು ಹೋಗಿರುತ್ತದೆ. ಜೀವಸತ್ವಗಳು, ಪೋಷಕಾಂಶಗಳು ಇರುಬೇಕಾದರೆ ತರಕಾರಿ, ಹಣ್ಣುಗಳು ತಾಜಾವಾಗಿ ಇರಲೇಬೇಕಾಗುತ್ತದೆ. ಹಾಗಾಗಿ ತರಕಾರಿಗಳನ್ನು ದೀರ್ಘಕಾಲ ತಾಜಾವಾಗಿಡಲು ಸಹಾಯ ಮಾಡುವ ಕೆಲವು ಸುಲಭ ಮತ್ತು ಅದ್ಭುತವಾದ ಸುಲಭ ಮಾರ್ಗಗಳು ಇಲ್ಲಿವೆ. ಇವುಗಳನ್ನು ಅನುಸರಿಸಿ ತರಕಾರಿ, ಹಣ್ಣುಗಳು ತಾಜಾವಾಗಿ ಇರುವಂತೆ ನೋಡಿಕೊಳ್ಳಬಹುದು.
1. ತಣ್ಣನೆಯ ನೀರಿನಲ್ಲಿ ಸಂಗ್ರಹಿಸಿ
ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಲೆಟಿಸ್ ಮತ್ತು ಆಲೂಗಡ್ಡೆಯಂತಹ ತರಕಾರಿಗಳನ್ನು ತಣ್ಣೀರಿನಿಂದ ತುಂಬಿದ ಪಾತ್ರೆಯಲ್ಲಿ ಸಂಗ್ರಹಿಸಬಹುದು. ಆದರೆ, ಈ ತರಕಾರಿಗಳ ತಾಜಾತನವನ್ನು ಹೆಚ್ಚಿಸಲು ಪ್ರತಿ ಎರಡು ದಿನಗಳಿಗೊಮ್ಮೆ ನೀರನ್ನು ಬದಲಾಯಿಸಬೇಕು. ಈ ರೀತಿಯಾಗಿ, ನೀವು ಎಲ್ಲಾ ಪದಾರ್ಥಗಳನ್ನು ತಾಜಾವಾಗಿ ಇರಿಸಿಕೊಳ್ಳಬಹುದು.
2. ವಿನೆಗರ್ ಬಳಸಿ
ಪಾತ್ರೆಯಲ್ಲಿ ನೀರು ಮತ್ತು ಸ್ವಲ್ಪ ವಿನೆಗರ್ ಸೇರಿಸಿ. ನಂತರ ಈ ಮಿಶ್ರಣದಲ್ಲಿ, ನೀವು ಯಾವುದೇ ರೀತಿಯ ಬೆರಿ, ಸೇಬು, ಹಸಿರು ಈರುಳ್ಳಿ, ಬೆಲ್ ಪೆಪರ್, ಟೊಮೆಟೊ, ಪೇರಲೆ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಐದು ನಿಮಿಷಗಳ ಕಾಲ ನೆನೆಯಲು ಬಿಡಿ, ತದನಂತರ ಅದನ್ನು ತಾಜಾ ನೀರಿನಲ್ಲಿ ತೊಳೆಯಿರಿ. ಈಗ. ನೀವು ಇದನ್ನು ನಿಮ್ಮ ಫ್ರಿಜ್ನಲ್ಲಿ ದೀರ್ಘಾವಧಿಯವರೆಗೆ ಸಂಗ್ರಹಿಸಬಹುದು.
3. ಪೇಪರ್ ಟವಲ್ನಲ್ಲಿ ಸುತ್ತಿಡಿ
ಪೇಪರ್ ಟವೆಲ್ ಗಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬಳಕೆಯಲ್ಲಿರುತ್ತದೆ. ತರಕಾರಿಗಳನ್ನು ಸಂಗ್ರಹಿಸಲು ನೀವು ಈ ಪೇಪರ್ ಟವೆಲ್ ಗಳನ್ನು ಕೂಡ ಬಳಸಬಹುದು. ಹಸಿರು ಎಲೆಗಳ ತರಕಾರಿಗಳನ್ನು ಸಂಗ್ರಹಿಸಲು ಉತ್ತಮವಾಗಿ ಕೆಲಸ ಮಾಡುತ್ತದೆ. ಎಲೆಯುಳ್ಳ ತರಕಾರಿಗಳಲ್ಲಿ ಹೆಚ್ಚಿನ ತೇವಾಂಶವಿರುತ್ತದೆ. ಆದ್ದರಿಂದ, ಅದನ್ನು ಪೇಪರ್ ಟವಲ್ನಲ್ಲಿ ಸುತ್ತಿಡುವುದರಿಂದ ಹೆಚ್ಚುವರಿ ತೇವಾಂಶವನ್ನು ತಡೆಯಲು ಸಹಾಯ ಮಾಡುತ್ತದೆ.
4. ಘನೀಕರಿಸುವಿಕೆ
ರೆಫ್ರಿಜರೇಟರ್ನಲ್ಲಿ ಇರಿಸಬಹುದಾದ ಯಾವುದೇ ಉಳಿದ ಹಣ್ಣುಗಳು ಅಥವಾ ತರಕಾರಿಗಳನ್ನು ಕಂಟೇನರ್ಗೆ ವರ್ಗಾಯಿಸಿ ಮತ್ತು ನಂತರ ಅವುಗಳನ್ನು ಫ್ರೀಜರ್ನಲ್ಲಿ ಸಂಗ್ರಹಿಸಿ. ಈ ರೀತಿಯಾಗಿ ಮಾಡಿದರೆ ತರಕಾರಿ, ಹಣ್ಣುಗಳು ಕೊಳೆಯುವುದಿಲ್ಲ, ನಂತರ ಅವುಗಳನ್ನು ಬಳಸಬಹುದು.
5. ಬೇರುಗಳನ್ನು ಕತ್ತರಿಸಿ
ಬೇರುಗಳುಳ್ಳ ತರಕಾರಿಗಳಾದ ಸೀಮೆ ಬದನೆಕಾಯಿ, ಶತಾವರಿ, ಹಸಿರು ಈರುಳ್ಳಿ ಹೀಗೆ ಬೇರಿರುವ ತರಕಾರಿಗಳ ಬೇರುಗಳನ್ನು ಕತ್ತರಿಸಿ. ನಂತರ ಇವುಗಳನ್ನು ತಣ್ಣೀರಿನಲ್ಲಿ ಇಡಬೇಕು. ಈ ರೀತಿ ಮಾಡಿದ್ದಲ್ಲಿ ಇದನ್ನು ತುಂಬಾ ದಿನಗಳ ಕಾಲ ಹಾಳಾಗದಂತೆ ನೋಡಿಕೊಳ್ಳಬಹುದು.