ಬೆಂಗಳೂರು : ನೋಂದಣಿ ಮತ್ತು ಮುದ್ರಾಂಕ ಇಲಾಖೆ ಶೀಘ್ರದಲ್ಲೇ ಹಿಂದೂ ವಿವಾಹ ಪ್ರಮಾಣಪತ್ರವನ್ನು ಆನ್ಲೈನ್ನಲ್ಲಿ ವಿತರಿಸಲಾಗುವುದು ಎಂದು ವರದಿಯಾಗಿದೆ. ಸದ್ಯ ಈ ಪ್ರಕ್ರಿಯೆ ನಡೆಯುತ್ತಿದೆ.
ಆನ್ ಲೈನ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪರೀಕ್ಷಿಸಿ ಸಿದ್ಧಗೊಳಿಸಲಾಗಿದೆ. ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿ ಬಿಆರ್ ಮಮತಾ ತಿಳಿಸಿದ್ದಾರೆ.
ಪ್ರಸ್ತುತ ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಥವಾ ಆನ್ ಲೈನ್ನಲ್ಲಿ ಲಭ್ಯವಿರುವ ಮೆಮೊರಾಂಡಮ್ ಆಫ್ ಮ್ಯಾರೇಜ್ ಫಾರ್ಮ್ ಅನ್ನು 15 ರೂ.ಗಳ ಶುಲ್ಕ ನೀಡಿ ಭರ್ತಿ ಮಾಡಬೇಕು. ವಧು ಮತ್ತು ವರರು ಹೆಸರು, ವಯಸ್ಸು, ಪ್ರಸ್ತುತ ವೈವಾಹಿಕ ಸ್ಥಿತಿ, ವಿವಾಹದ ದಿನಾಂಕ, ನಿವಾಸ ವಿಳಾಸ, ವಿವಾಹದ ಸ್ಥಳ, ಸಹಿ ಮತ್ತು ಮೂವರು ಸಾಕ್ಷಿಗಳ ಬಗ್ಗೆ ಮಾಹಿತಿ ಒದಗಿಸಬೇಕು.
ಮದುವೆಯ ಸಮಯದಲ್ಲಿ ತೆಗೆದ ಫೋಟೋ ಮತ್ತು ಆಮಂತ್ರಣ ಪತ್ರಿಕೆಯನ್ನು ಸಹ ಸಲ್ಲಿಸಬೇಕು. ಪ್ರಮಾಣಪತ್ರಕ್ಕೆ ಸಬ್ ರಿಜಿಸ್ಟ್ರಾರ್ ಸಹಿ ಮಾಡುತ್ತಾರೆ. ಇದೆಲ್ಲವೂ ಸುಮಾರು ಅರ್ಧ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದೆಲ್ಲವೂ ಇನ್ನು ಮುಂದೆ ಆನ್ ಲೈನ್ನಲ್ಲಿ ಲಭ್ಯವಾಗಲಿದೆ.