ಹೊಸದಿಲ್ಲಿ : ನಿತ್ಯ ನಿರಂತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.
ಹೋಟೆಲ್, ರೆಸ್ಟೋರೆಂಟ್ ಹಾಗೂ ಉದ್ದಿಮೆಗಳಲ್ಲಿ ಬಳಸುವ ವಾಣಿಜ್ಯ ಉದ್ದೇಶದ ಎಲ್ಪಿಜಿ ಸಿಲಿಂಡರ್ ದರ ಸೋಮವಾರ 266 ರೂ. ಹೆಚ್ಚಳವಾಗಿದೆ.
ಇದರೊಂದಿಗೆ ಬೆಂಗಳೂರಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುವ 19 ಕೆ.ಜಿ ಎಲ್ಪಿಜಿ ಸಿಲಿಂಡರ್ ದರ 2,278 ರೂ.ಗೆ ಜಿಗಿದಿದೆ. ಇದರ ಪರಿಣಾಮ ಹೋಟೆಲ್ ತಿಂಡಿಗಳ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಿದ್ದರೂ, ಜನತೆ ಮನೆಗಳಲ್ಲಿ ಬಳಸುವ 14.2 ಕೆ.ಜಿ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಸೋಮವಾರ ಯಾವುದೇ ವ್ಯತ್ಯಾಸವಾಗಿಲ್ಲ. ಹೀಗಾಗಿ ಗೃಹ ಬಳಕೆ ಸಿಲಿಂಡರ್ ಬಳಕೆದಾರರಿಗೆ ಈ ಹೆಚ್ಚಳದ ಬಿಸಿ ತಟ್ಟುವುದಿಲ್ಲ. ಕಳೆದ ಆಗಸ್ಟ್ನಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ ಎಲ್ಪಿಜಿ ಸಿಲಿಂಡರ್ ದರದಲ್ಲಿ 122 ರೂ. ಇಳಿಕೆಯಾಗಿತ್ತು. ಮೇನಲ್ಲಿ 45 ರೂ. ಕಡಿತವಾಗಿತ್ತು. ಆದರೆ ಅಂತಾ ರಾಷ್ಟ್ರೀಯ ಕಚ್ಚಾ ತೈಲದ ಏರುಗತಿಯೊಂದಿಗೆ ದೇಶಿ ಮಾರುಕಟ್ಟೆಯಲ್ಲಿ ಅನಿಲ ದರ ಕೂಡ ಹೆಚ್ಚಳವಾಗಿದೆ.