ಬೆಂಗಳೂರು : ಇತ್ತೀಚೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಮಾತನಾಡುವ ಭರದಲ್ಲಿ ಬಿಜೆಪಿ , ಜೆಡಿಎಸ್ ಪಕ್ಷಗಳನ್ನು ನಾಯಿಗೆ ಹೋಲಿಸಿ ವಿವಾದ ಸೃಷ್ಟಿಸಿದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಇದೀಗ ತಮ್ಮ ಮಾತಿಗೆ ಕ್ಷಮೆಯಾಚಿಸಿದ್ದಾರೆ.
ಮೈಸೂರಿನ ಸಮಾರಂಭವೊಂದರಲ್ಲಿ ಮಾತಾಡುವಾಗ ಮುಖ್ಯಮಂತ್ರಿ ಚಂದ್ರು ಅವರು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ನಾಯಿಗಳಿದ್ದಂತೆ ಎಂಬುದಾಗಿ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಯಿಂದ ಬೇಸರಗೊಂಡ ಶಾಂತಿನಗರ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಡಿ.ಸಿ. ಪ್ರಕಾಶ್ ಮುಖ್ಯಮಂತ್ರಿ ಚಂದ್ರು ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು.
ಇದರಿಂದ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರೋದನ್ನು ಗಮನಿಸಿದ ಚಂದ್ರು ಅವರು,’ ನಾನೊಬ್ಬ ಕಲಾವಿದ. ನೂರಾರು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ರಂಜಕವಾಗಿ ಮಾತಾಡುವುದೇ ನನ್ನ ಕಸುಬು. ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಮಾತಾಡಿದಾಗ ಯಾರ ಮನ ನೋಯಿಸುವ ಪ್ರಮೇಯವೇ ಇಲ್ಲ. ಮೈಸೂರಿನ ಸಭೆಯಲ್ಲಿ ಎಲ್ಲರೂ ನನ್ನ ಮಾತುಗಳನ್ನು ಕೇಳಿ ನಕ್ಕರೇ ಹೊರತು ಅದನ್ನು ಗಂಭೀರ ಆರೋಪವೆಂದು ಯಾರೂ ಭಾವಿಸಲಿಲ್ಲ. ಆದರೆ ಅದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ನಾಲ್ಕು ದಿನದ ಈ ಬಾಳಿನಲ್ಲಿ ನಕ್ಕು ನಲಿಯುತ್ತಿರಬೇಕೆಂಬುದೇ ನನ್ನ ಆಶಯ’ ಎಂದು ಲಿಖಿತ ರೂಪದಲ್ಲಿ ಕ್ಷಮೆ ಕೇಳಿ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ