ನವದಿಲ್ಲಿ : ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ರಾಷ್ಟ್ರೀಯತೆ ಬಗ್ಗೆ ಮಾತನಾಡಿದ ಟ್ವೀಟರ್ ಖಾತೆದಾರರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.
ಕತುವಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು,’ ಜಗತ್ತಿನ ಮುಂದೆ ನಾವು ಇಂತಹ ಒಂದು ದೇಶವೆಂದು ಅನಿಸಿಕೊಳ್ಳಬೇಕೆಂದು ಬಯಸುತ್ತಿದ್ದೇವೆಯೇ?, ನಮ್ಮ ಜಾತಿ, ವರ್ಣ, ಧರ್ಮ ಹಾಗೂ ಲಿಂಗವನ್ನು ಮರೆತು ಈ ಎಂಟರ ಬಾಲೆಗಾಗಿ ನಾವಿಂದು ಎದ್ದು ನಿಲ್ಲದೇ ಇದ್ದರೆ ನಾವು ಈ ಜಗತ್ತಿನಲ್ಲಿ ಯಾವುದೇ ವಿಚಾರಕ್ಕೂ ಎದ್ದು ನಿಲ್ಲುವವರಾಗುವುದಿಲ್ಲ. ಕನಿಷ್ಠ ಮಾನವತೆಗೂ ಕೂಡ. ನನಗೆ ಅಸಹನೆ ಮೂಡುತ್ತಿದೆ'' ಎಂದು ಸಾನಿಯಾ ಟ್ವೀಟ್ ಮಾಡಿದ್ದರು.
ಆಗ ಕಿಚು ಕನ್ನನ್ ನಮೋ ಎಂಬ ಟ್ವಿಟರ್ ಖಾತೆದಾರರು, ‘ನಿಮ್ಮ ಎಲ್ಲ ಗೌರವಗಳೊಂದಿಗೆ, ಮೇಡಂ, ನೀವು ಯಾವ ದೇಶದ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಒಬ್ಬ ಪಾಕಿಸ್ತಾನಿಯನ್ನು ವಿವಾಹವಾಗಿದ್ದೀರಿ. ನೀವು ಈಗ ಭಾರತೀಯರಲ್ಲ. ನಿಮಗೆ ಟ್ವೀಟ್ ಮಾಡಬೇಕೆಂದಿದ್ದರೆ, ಪಾಕ್ ಉಗ್ರರ ಸಂಘಟನೆಗಳಿಂದ ಹತರಾದ ಮುಗ್ಧರ ಬಗ್ಗೆ ಟ್ವೀಟ್ ಮಾಡಿ'' ಎಂದು ಟ್ವೀಟ್ ಮಾಡಿ ಸಾನಿಯಾ ಅವರಿಗೆ ವ್ಯಂಗ್ಯ ಮಾಡಿದ್ದಾರೆ.
ಇದಕ್ಕೆ ಸಾನಿಯಾ ಮಿರ್ಜಾ ಅವರು ಟ್ವೀಟ್ ಮಾಡಿ,’ ಮೊದಲನೆಯದಾಗಿ ಮದುವೆ ಎಂಬುದು ವೈಯುಕ್ತಿಕ ವಿಚಾರ, ಎರಡನೆಯದಾಗಿ ನಿಮ್ಮಂತಹ ಕೀಳು ಜೀವಗಳು ನಾನು ಯಾವ ದೇಶಕ್ಕೆ ಸೇರಿದವಳು ಎಂದು ಹೇಳುವ ಹಾಗಿಲ್ಲ. ನಾನು ಭಾರತಕ್ಕಾಗಿ ಆಡುತ್ತೇನೆ, ನಾನೊಬ್ಬಳು ಭಾರತೀಯಳು ಹಾಗೂ ಮುಂದೆಯೂ ಭಾರತೀಯಳಾಗಿಯೇ ಇರುತ್ತೇನೆ. ನೀವು ಧರ್ಮ ಹಾಗೂ ದೇಶದ ಪರಿಧಿಯನ್ನು ದಾಟಿ ನೋಡಿದರೆ ನೀವು ಕೂಡ ಮಾನವತೆಗಾಗಿ ಎದ್ದು ನಿಲ್ಲುತ್ತೀರಿ’ ಎಂದು ಖಡಕ್ ಆಗಿ ಉತ್ತರಿಸಿ ಅವರ ಚಳಿ ಬಿಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ