ನವದೆಹಲಿ, ಅ 05 : ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ನೀಡುವ 50 ಸಾವಿರ ರೂ. ಪರಿಹಾರ 30 ದಿನದೊಳಗೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕೋವಿಡ್ನಿಂದ ಮೃತಪಟ್ಟ ಪ್ರತಿ ವ್ಯಕ್ತಿಯ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಕಳೆದ ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಮುಂದೆ ಹೇಳಿಕೊಂಡಿತ್ತು. ಇದಕ್ಕೆ ಇದೀಗ ಸರ್ವೋಚ್ಛ ನ್ಯಾಯಾಲಯದಿಂದ ಅನುಮೋದನೆ ಸಿಕ್ಕಿದೆ.
ಕೋವಿಡ್ನಿಂದ ಮೃತಪಟ್ಟಿರುವವರ ಮರಣ ಪ್ರಮಾಣಪತ್ರದಲ್ಲಿ ಕೊರೊನಾ ಎಂದು ಬರೆಯಲಾಗಿಲ್ಲ ಎಂದು ಹೇಳುವ ಮೂಲಕ ಯಾವುದೇ ಸಾವಿಗೆ ಪರಿಹಾರ ನೀಡುವುದನ್ನ ರಾಜ್ಯಗಳು ನಿರಾಕರಿಸುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.
ಆದಷ್ಟು ಬೇಗ, ರಾಜ್ಯವು ಪ್ರತಿ ಜಿಲ್ಲೆಯಲ್ಲಿ ಸಮಿತಿ ರಚನೆ ಮಾಡಿ, ಅಧಿಸೂಚನೆ ಹೊರಡಿಸಬೇಕು. ಅಲ್ಲಿ ಸಂತ್ರಸ್ತ ಕುಟುಂಬ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಬಹುದು ಎಂದಿದೆ. ಜೊತೆಗೆ ಮರಣ ಪ್ರಮಾಣ ಪತ್ರದ ತಿದ್ದುಪಡಿಗಾಗಿ ಅರ್ಜಿ ಸಹ ಸಲ್ಲಿಕೆ ಮಾಡಬಹುದು ಎಂದಿದೆ. ಕೊರೊನಾದಿಂದಾಗಿ ಮನೆಯಲ್ಲಿ ಮರಣ ಹೊಂದಿರುವ ಕುಟುಂಬಗಳು ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದಿದೆ.
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಆಯಾ ರಾಜ್ಯಗಳು ಕೊರೊನಾದಿಂದ ಸಾವನ್ನಪ್ಪಿರುವ ಕುಟುಂಬಗಳಿಗೆ ಪರಿಹಾರ ನೀಡಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಭಾರತದಲ್ಲಿ ಇಲ್ಲಿವರೆಗೆ 4.45 ಲಕ್ಷ ಜನರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನೀಡಿತ್ತು. ಜೊತೆಗೆ ಎಲ್ಲ ರಾಜ್ಯಗಳು 50 ಸಾವಿರ ರೂ. ಪರಿಹಾರ ನೀಡಲಿವೆ ಎಂದಿತು.
ಇದರ ಪರಾಮರ್ಶೆ ನಡೆಸಿದ ಸುಪ್ರೀಂಕೋರ್ಟ್ ಇಂದು ಮಹತ್ವದ ನಿರ್ಧಾರ ಹೊರಹಾಕಿದ್ದು, ಪ್ರತಿ ರಾಜ್ಯಗಳು 50 ಸಾವಿರ ರೂ. ನೀಡುವಂತೆ ಸೂಚನೆ ನೀಡಿದ್ದು, 30 ದಿನದೊಳಗೆ ಪರಿಹಾರದ ಹಣ ಸಂತ್ರಸ್ತ ಕುಟುಂಬಕ್ಕೆ ಸೇರಬೇಕು ಎಂದಿದೆ.
ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಮತ್ತು ಬಿಪಿಎಲ್ ಯೇತರ ಕುಟುಂಬಗಳಿಗೆ ಕರ್ನಾಟಕ ಸರ್ಕಾರವು ನೀಡುವ ಪರಿಹಾರ ಮೊತ್ತದಲ್ಲಿ ಬದಲಾವಣೆ ಮಾಡಿದ್ದು, ಬಿಪಿಎಲ್ ಕುಟುಂಬದ ವ್ಯಕ್ತಿಗೆ ನೀಡುವ ಪರಿಹಾರವನ್ನು ಒಂದು ರೂ.1 ಲಕ್ಷದಿಂದ ರೂ.1.50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.
ಇದೇ ವೇಳೆ ಬಿಪಿಎಲ್ ಯೇತರ ಕುಟುಂಬಕ್ಕೆ ರೂ.50 ಸಾವಿರ ಪರಿಹಾರವನ್ನು ಹೊಸದಾಗಿ ಘೋಷಿಸಿ ಮಂಗಳವಾರ ಆದೇಶ ಹೊರಡಿಸಿದೆ. ಬಿಪಿಎಲ್ ಕುಟುಂಬದವರಿಗೆ ರಾಜ್ಯ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಯಡಿ ರೂ.1 ಲಕ್ಷ ಮತ್ತು ಎಸ್ಡಿಆರ್ಎಫ್ನಿಂದ ರೂ. 50 ಸಾವಿರ ಸೇರಿ 1.50 ಲಕ್ಷ ರು. ನೀಡಲಾಗುತ್ತದೆ.
ಬಿಪಿಎಲ್ ಕುಟುಂಬದ ಒಂದಕ್ಕಿಂತ ಹೆಚ್ಚು ಮಂದಿ ಕೋವಿಡ್ನಿಂದ ಮೃತಪಟ್ಟಿದ್ದರೆ ಆಗ ಮೊದಲ ವ್ಯಕ್ತಿಗೆ ರೂ.1.50 ಲಕ್ಷ ಹಾಗೂ ಉಳಿದವರಿಗೆ ತಲಾ ರೂ.50 ಸಾವಿರ ಪರಿಹಾರ ದೊರೆಯುತ್ತದೆ. ಇನ್ನು, ಬಿಪಿಎಲ್ಯೇತರ ಕುಟುಂಬದಲ್ಲಿ ಕೋವಿಡ್ನಿಂದ ಸಾವನ್ನಪ್ಪಿದ್ದರೆ ತಲಾ ರೂ.50 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.