ಜಿನೆವಾ : ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಏರಿಳಿತ ಕಂಡುಬರುತ್ತಿರುವಾಗಲೇ,
ಒಮಿಕ್ರೋನ್ ತಳಿಯ ಬಿಎ.2.75 ಎಂಬ ಹೊಸ ಉಪತಳಿಯೊಂದು ಭಾರತದಲ್ಲಿ ಪತ್ತೆಯಾಗಿದೆ ಹಾಗೂ ಇದು ಸುಮಾರು 10 ದೇಶಗಳಿಗೆ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಎಚ್ಚರಿಕೆಯ ಗಂಟೆ ಮೊಳಗಿಸಿದೆ.
ಯುರೋಪ್ ಹಾಗೂ ಅಮೆರಿಕದಲ್ಲಿ ಬಿಎ.4 ಮತ್ತು ಬಿಎ.5 ಉಪತಳಿಗಳಿಂದ ಸೋಂಕು ಪ್ರಕರಣಗಳ ಉಬ್ಬರ ಕಂಡುಬಂದಿದೆ.
ಭಾರತದಂತಹ ದೇಶಗಳಲ್ಲಿ ಬಿಎ.2.75 ಉಪತಳಿ ಪತ್ತೆಯಾಗಿದ್ದು, ಅದರ ಮೇಲೆ ನಿಗಾ ಇಟ್ಟಿದ್ದೇವೆ ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೋಸ್ ಅಧನೋಮ್ ಘೇಬ್ರಿಯೇಸಸ್ ಅವರು ತಿಳಿಸಿದ್ದಾರೆ. ಆದರೆ ಈ ತಳಿಯಿಂದಾಗಿಯೇ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆಯೇ ಎಂಬುದನ್ನು ಅವರು ಹೇಳಿಲ್ಲ.
ಜಾಗತಿಕವಾಗಿ ಕಳೆದ ಎರಡು ವಾರಗಳಿಂದ ಸೋಂಕು ಪ್ರಕರಣಗಳ ಸಂಖ್ಯೆ ಶೇ.30ರಷ್ಟುಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಆರು ವಲಯಗಳ ಪೈಕಿ ನಾಲ್ಕರಲ್ಲಿ ಕಳೆದ ವಾರ ಸೋಂಕು ಹೆಚ್ಚಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.