ನವದೆಹಲಿ(ಜು.15): ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮ್ಮ ಮಂತ್ರಿ ಪರಿಷತ್ ಸದಸ್ಯರ ಜತೆ ಸಭೆ ನಡೆಸಿದರು. ಈ ವೇಳೆ ನೂತನ ಸಚಿವರಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಮೋದಿ ಅವರು ಪಾಠ ಮಾಡಿದರು.
* ಹೋಮ್ವರ್ಕ್ ಮಾಡಿಕೊಂಡು ಬನ್ನಿ
* ಪ್ರತಿಪಕ್ಷಗಳಿಗೆ ತಕ್ಕ ಉತ್ತರ ನೀಡಿ
* ನೂತನ ಸಚಿವರಿಗೆ ಮೋದಿ ಸಂಸತ್ ಪಾಠ
ಸಂಪುಟ ಸಭೆ ಬಳಿಕ ಸಂಜೆ ರಾಜ್ಯ ಸಚಿವರೂ ಸೇರಿದಂತೆ ಎಲ್ಲ ಮಂತ್ರಿಗಳ ಸಭೆ ನಡೆಸಿದ ಮೋದಿ, ನೂತನ ಸಚಿವರು ಸದನದ ನಿಯಮಾವಳಿಗಳನ್ನು ಅರ್ಥೈಸಿಕೊಳ್ಳಬೇಕು. ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಯತ್ನಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಪ್ರತಿಪಕ್ಷಗಳ ಪ್ರಶ್ನೆಗೆ ಕರಾವಾಕ್ಕಾಗಿ ಉತ್ತರಿಸುವ ನಿಟ್ಟಿನಲ್ಲಿ ಸಚಿವರು ಸಿದ್ಧತೆ ಮಾಡಿಕೊಂಡು ಬರಬೇಕು. ಕಲಾಪಗಳಿಗೆ ತಪ್ಪದೇ ಹಾಜರಾಗಬೇಕು ಎಂದು ಸೂಚಿಸಿದರು ಎಂದು ಮೂಲಗಳು ಹೇಳಿವೆ.
ಇತ್ತೀಚೆಗೆ ಮೋದಿ ಮಂತ್ರಿಮಂಡಲದಲ್ಲಿ 43 ಸಚಿವರು ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ್ದರು.