ಚಿತ್ರದುರ್ಗ ರೈತರ ಸಾಧನೆ ನೋಡಿ !
50 ಜಂಬು ನೇರಳೆ ಮರದಿಂದ ಲಕ್ಷಾಂತರ ರೂಪಾಯಿ ಸಂಪಾದನೆ,
ಚಿತ್ರದುರ್ಗ : ಬಯಲು ಸೀಮೆ, ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಗಿಂತ ಬಿಸಿಲೇ ಹೆಚ್ಚು. ಆದರೂ ಇಲ್ಲಿನ ರೈತರಿಗೆ ಬಿಡದ ಛಲ. ಎಷ್ಟೆ ಕಷ್ಟ ಆದರೂ ಒಳ್ಳೆಳ್ಳೆ ಬೆಳೆಗಳನ್ನ ಬೆಳೆಯೋ ಪ್ರಯತ್ನಗಳನ್ನ ನಿರಂತರವಾಗಿ ಮಾಡುತ್ತಲೇ ಇರುತ್ತಾರೆ.
ಎದೆಗುಂದದ ಇವರ ಪರಿಶ್ರಮದ ಫಲವಾಗಿಯೇ ಹೂ, ಹಣ್ಣು, ತರಕಾರಿ, ಸೇರಿ ಅನೇಕ ಬೆಳೆಗಳನ್ನ ಬೆಳೆದ ಲಕ್ಷ ಲಕ್ಷ ಲಾಭ ಗಳಿಸಿದ ಅನೇಕ ರೈತರು ನಮ್ಮ ಕಣ್ಣು ಮುಂದೆಯೇ ನಿದರ್ಶನವಾಗಿದ್ದರೆ. ಇದೇ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಈ ರೈತ ಸಹೋದರರು ಬೆಳೆದ ನೇರಳೆ ಬೆಳೆ ಎಲ್ಲರಿಗೂ ಪ್ರಿಯವಾಗಿದ್ದು, ನಿರೀಕ್ಷೆ ಮೀರಿದ ಆದಾಯವನ್ನ ತಂದುಕೊಡುತ್ತಿದೆ. ನೇರಳೆ ಹಣ್ಣು ಬಲು ಅಪರೂಪದ ಹಣ್ಣು, ಇದರ ಮೇಲೆ ಒಮ್ಮೆ ಕಣ್ಣು ಬಿದ್ದರೆ, ಎಂಥವರೂ ರುಚಿ ಸವಿಯ ಬೇಕೆನಿಸೋದು ಗ್ಯಾರಂಟಿ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದ ತ್ರಿಯಂಬಕ ಮೂರ್ತಿ ಹಾಗೂ ಸಹೋದರ ರವಿಶಂಕರ್ ಎಂಬ ರೈತರು ತನ್ನ ಒಂದುವರೆ ಎಕರೆಯಲ್ಲಿ ಸುಮಾರು 30 ಅಡಿಯೊಂದರಂತೆ 50-60 ನೇರಳೆ ಸಸಿ ಹಾಕಿದ್ದು, ಅವು ಈಗ ಮರಗಳಾಗಿ ಫಸಲು ಬಿಡಲು ಪ್ರಾರಂಭ ಮಾಡಿವೆ. ಇದರಿಂದ ರೈತರು ಜೀವನದಲ್ಲಿ ನೆಮ್ಮದಿ ಕಾಣುತ್ತಿದ್ದಾರೆ.
ಈ ಹಣ್ಣು ವರ್ಷಕ್ಕೊಮ್ಮೆ ಮಾತ್ರ ಇಳುವರಿ ಬರುತ್ತದೆ ಆದರೂ ಲಕ್ಷಗಟ್ಟಲೆ ಆದಾಯ ತಂದುಕೊಡುತ್ತದೆ. ಹಾಗಾಗಿ ನೆಮ್ಮದಿ ಜೀವನ ಕಂಡುಕೊಂಡಿದೆ ಈ ಕುಟುಂಬ. ಮೂಲತಃ ಕೃಷಿ ಕುಟುಂಬದವರಾಗಿರುವ ತ್ರಿಯಂಬಕ ಮೂರ್ತಿ, ರವಿಶಂಕರ್, ಸಹೋದರರು, ಬರೊಬ್ಬರಿ, 103 ಎಕರೆ ಜಮೀನು ಹೊಂದಿದ್ದಾರೆ. ಹಾಗಾಗಿಯೇ ಎಲ್ಲಾ ತರಹದ ಬೆಳೆಗಳನ್ನ ಬೆಳೆಯೋ ಆಸೆ, ಕಾಯಕ ಮನೋಭಾವ ಹೊಂದಿದ್ದಾರೆ. ಬೆಂಗಳೂರಿನ ನರ್ಸರಿ ಫಾರಂ ಒಂದರಲ್ಲಿ ಜಂಬು ತಳಿಯ ನೇರಳೆ ಸಸಿಗಳನ್ನು ಖರೀದಿಸಿ ತಂದು ತನ್ನ ಜಮೀನಿನಲ್ಲಿ ನಾಟಿ ಮಾಡಿದ್ದರು. ನಾಲ್ಕು ವರ್ಷಗಳ ನಂತರ ನೇರಳೆ ಹಣ್ಣು ಪ್ರಾರಂಭವಾಗಿದೆ. ಹಂತ ಹಂತವಾಗಿ ಗಿಡದಲ್ಲಿ ಇಳುವರಿ ಜಾಸ್ತಿಯಾಗುತ್ತಾ ಬರುತ್ತಿದ್ದು, . ವರ್ಷದ ಜನವರಿ ತಿಂಗಳಲ್ಲಿ ಚಿಗುರೊಡೆದು, ಮೊಗ್ಗು ಪ್ರಾರಂಭವಾಗುತ್ತದೆ.
ಎಳೆಕಾಯಿಯಾಗಿ, ಆಮೇಲೆ ಕೆಂಪು ಬಣ್ಣಕ್ಕೆ ಬಂದ ನಂತರ ಕಪ್ಪು ಬಣ್ಣಕ್ಕೆ ತಿರುಗಿ ಹಣ್ಣಾಗುತ್ತದೆ. ಮುಂಗಾರು ಹಂಗಾಮಿನ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕೇವಲ ಒಂದು ತಿಂಗಳ ಕಾಲ ಮಾತ್ರ ಈ ನೇರಳೆ ಹಣ್ಣು ಇಳುವರಿ ಬರುವುದನ್ನು ಕಾಣಬಹುದಾಗಿದೆ. ವರ್ಷಕ್ಕೊಮ್ಮೆ ಬರುವ ಹಣ್ಣು ಒಂದು ಗಿಡದಲ್ಲಿ ಪ್ರಾರಂಭದಲ್ಲಿ 3, 30,50,80, ಕೆಜಿಯಿಂದ ದಿನ ಕಳೆದಂತೆ ಇಳುವರಿ ಹೆಚ್ಚುತ್ತದೆ. ಒಂದು ವರ್ಷಕ್ಕೆ ಸರಾಸರಿ 30-40 ಕೆಜಿ ಹಣ್ಣು ಬರುವ ಮೂಲಕ 60 ಗಿಡದಲ್ಲಿ ಸುಮಾರು ದಿನಕ್ಕೆ 250 -300 ಕೆಜಿ ಯಂತೆ ಪ್ರತಿ ವರ್ಷ 4 ಸಾವಿರ ಕೆಜಿ ಫಸಲು ಕೊಡುತ್ತಿವೆ.
ಆದಾಯಕ್ಕೆ ತಕ್ಕಂತೆ ಖರ್ಚು ಕೂಡ ಇದಕ್ಕೆ ತಗುಲುತ್ತದೆ, ಅದರಲ್ಲಿ ಒಂದು ಗಿಡ ಬೆಳಸಲಿಕ್ಕೆ 1000 ರೂಪಾಯಿ ಖರ್ಚು ಬರುತ್ತದೆ ಎನ್ನಲಾಗಿದೆ, ಇನ್ನೂ ಬೇಡಿಕೆ ಅನುಗುಣವಾಗಿ ಹಣ್ಣುಗಳನ್ನು ಕೀಳಬೇಕಾಗುತ್ತದೆ. ಇದಕ್ಕೆ ಸರಿಯಾದ ಮಾರುಕಟ್ಟೆ ಇಲ್ಲ. ಮಾರಾಟಗಾರರಿಂದ ಬೇಡಿಕೆ ಬಂದಂತೆ ಹಣ್ಣುಗಳನ್ನು ಕಿತ್ತು ಒಂದು ಕ್ರೇಟ್ ನಲ್ಲಿ 25, 30 ಕೆಜಿ ತೂಕ ಪ್ಯಾಕ್ ಮಾಡಿ ಕೊಡಲಾಗುತ್ತದೆ. ಒಂದು ಕೆಜಿಗೆ ಹೋಲ್ ಸೇಲ್ ದರದಲ್ಲಿ 130 ರೂನಂತೆ ಕೊಡಲಾಗುತ್ತದೆ. ಚಿಲ್ಲರೆ ವ್ಯಾಪಾರಿಗಳು ಕೆಜಿಗೆ 200 ರೂಪಾಯಿ ಮಾರಾಟ ಮಾಡುತ್ತಾರೆ