ನವದೆಹಲಿ : ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂಬ ರಷ್ಯಾದ ಗಂಭೀರ ಆರೋಪವನ್ನು ಭಾರತ ನಿರಾಕರಿಸಿದೆ.
ರಷ್ಯಾ ಆರೋಪ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳ ಒತ್ತೆಯಾಳಾಗಿರುವ ಕುರಿತು ಇದುವರೆಗೆ ಯಾವುದೇ ವರದಿಗಳೂ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಖಾರ್ಕೀವ್ನಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ದೇಶದ ಪಶ್ಚಿಮ ಭಾಗದ ಕಡೆಯಿಂದ ವಿದ್ಯಾರ್ಥಿಗಳನ್ನು ಹೊರಗೆ ಸಾಗಿಸಲು ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸುವಂತೆ ನಾವು ಉಕ್ರೇನ್ ಅಧಿಕಾರಿಗಳ ನೆರವು ಕೋರಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.
ಉಕ್ರೇನ್ನಲ್ಲಿನ ನಮ್ಮ ರಾಯಭಾರ ಕಚೇರಿಯು ಅಲ್ಲಿರುವ ಭಾರತೀಯ ಪ್ರಜೆಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ಉಕ್ರೇನ್ ಅಧಿಕಾರಿಗಳ ಸಹಕಾರದೊಂದಿಗೆ ಅನೇಕ ವಿದ್ಯಾರ್ಥಿಗಳು ನಿನ್ನೆ ಖಾರ್ಕೀವ್ ತೊರೆದಿದ್ದಾರೆ.
ರಷ್ಯಾ, ರೊಮೇನಿಯಾ, ಪೋಲ್ಯಾಂಡ್, ಹಂಗೆರಿ, ಸ್ಲೊವೇಕಿಯಾ ಮತ್ತು ಮಾಲ್ಡೋವಾ ಸೇರಿದಂತೆ ಈ ಪ್ರದೇಶದ ದೇಶಗಳ ಜೊತೆಗೆ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸುತ್ತಿದ್ದೇವೆ.