ಚಾಮರಾಜನಗರ: ಮತಯಾಚಿಸಲು ಹೋದ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ನಡೆದಿದೆ.
ಗೀತಾ ಮಹದೇವಪ್ರಸಾದ್, ಗುಂಡ್ಲುಪೇಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಈ ಕ್ಷೇತ್ರ ವ್ಯಾಪ್ತಿಯ ಹಿರಿಕಾಟಿ ಗ್ರಾಮಕ್ಕೆ ತಮ್ಮ ಪಕ್ಷದ ಮುಖಂಡರೊಂದಿಗೆ ಮತಯಾಚನೆಗೆ ಹೋದ ಸಂದರ್ಭದಲ್ಲಿ ಸಚಿವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿಗಳ ಕೊರತೆ ಇದೆ. ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ರಸ್ತೆಗಳು ಹಾಳಾಗಿವೆ. ಇದನ್ನು ಪ್ರಶ್ನಿಸಿದ್ರೆ ನಿಮ್ಮ ಬೆಂಬಲಿಗರು ಪೊಲೀಸರನ್ನು ಬಳಸಿಕೊಂಡು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಹೀಗಾಗಿ ನಿಮಗೆ ಯಾಕೆ ಓಟು ಹಾಕಬೇಕು. ಮತ ಕೇಳಲು ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಗ್ರಾಮಸ್ಥರು, ಈ ಬಾರಿ ನಾವು ಮತದಾನವನ್ನೇ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದ್ರು.
ಸಚಿವೆ ಗೀತಾ ಮಹದೇವಪ್ರಸಾದ್ ಅವರು ಗ್ರಾಮಸ್ಥರನ್ನು ಸಮಾಧಾನಿಸಲು ಯತ್ನಿಸಿದ್ರೂ ಸಹ ಅದು ವಿಫಲವಾಯಿತು. ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಸಚಿವರು ತಮ್ಮ ಬೆಂಬಲಿಗರೊಂದಿಗೆ ವಾಪಸ್ಸಾದ್ರು.