ಬೆಂಗಳೂರು, ಸೆ.29 : ನಗರದ ಹೊರವಲಯದಲ್ಲಿರುವ ಹಾಸ್ಟೆಲ್ವೊಂದರಲ್ಲಿ ಕೊರೊನಾ ಸ್ಫೋಟಗೊಂಡಿದೆ. ಹಾಸ್ಟೆಲ್ನಲ್ಲಿದ್ದ 335 ವಿದ್ಯಾರ್ಥಿನಿಯರ ಪೈಕಿ 54 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.
ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರ ಸಮೀಪದಲ್ಲಿರುವ ಶ್ರೀ ಚೈತನ್ಯ ಇಂಟರ್ ನ್ಯಾಷನಲ್ ಶಾಲೆಯ ಹಾಸ್ಟೆಲ್ನಲ್ಲಿ ತಂಗಿದ್ದ 54 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸ್ಟೆಲ್ನಲ್ಲಿ ಮೂರು ಬ್ಲಾಕ್ಗಳಿದ್ದು, ಒಂದು ಬ್ಲಾಕ್ನಲ್ಲಿ ತಂಗಿದ್ದ ತಮಿಳುನಾಡು ಹಾಗೂ ಸ್ಥಳೀಯ ಎಲ್ಲ 54 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಮುಂಜಾಗ್ರತಾ ಕ್ರಮವಾಗಿ ಉಳಿದ ಎಲ್ಲ ವಿದ್ಯಾರ್ಥಿಗಳನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಶಾಲೆಯನ್ನು ಬಂದ್ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಶಾಲೆಗೆ ಬಂದು ತಮ್ಮ ಮಕ್ಕಳ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ 54 ವಿದ್ಯಾರ್ಥಿಗಳ ಪೈಕಿ ಎಂಟು ವಿದ್ಯಾರ್ಥಿಗಳಿಗೆ ಅತಿಯಾದ ವಾಂತಿ, ಭೇದಿ ಕಾಣಿಸಿಕೊಂಡಿರುವುದರಿಂದ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.
ನಿನ್ನೆ ಒಂದೇ ದಿನ ವಿದ್ಯಾರ್ಥಿಯೊಬ್ಬರಿಗೆ ಕಾಣಿಸಿಕೊಂಡ ಜ್ವರ ಮತ್ತು ಕೆಮ್ಮು ಇಡೀ ಹಾಸ್ಟೆಲ್ಗೆ ವ್ಯಾಪಿಸಿದ ಪರಿಣಾಮ ಇಂತಹ ಘಟನೆ ಸಂಭವಿಸಿದೆ. ಸ್ಥಳಕ್ಕೆ ಬಿಬಿಎಂಪಿ ಅಕಾರಿಗಳು ದೌಡಾಯಿಸಿದ್ದು, ಶಾಲೆ ಮುಂಭಾಗದ ರಸ್ತೆಯನ್ನು ಸೀಲ್ಡೌನ್ ಮಾಡಿ ಸೋಂಕು ಅಕ್ಕಪಕ್ಕದವರಿಗೆ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.