ಬೆಂಗಳೂರು : ಗಣೇಶೋತ್ಸವದ ಸಂದರ್ಭದಲ್ಲಿ ಕೊರೊನಾ ಹರಡದಂತೆ ವ್ಯಾಪಕ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ಗಣೇಶ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಸಾಕಷ್ಟು ಎಚ್ಚರಿಕೆ ವಹಿಸಲೇಬೇಕು. ಯಾವುದೇ ಮೆರವಣಿಗೆ ಮಾಡಲು ಅವಕಾಶ ಇಲ್ಲ ಎಂದರು. ಲಸಿಕೆ ಅಭಿಯಾನಕ್ಕೆ ವೇಗ
ನವೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲ ವಯಸ್ಕರಿಗೂ ಕೋವಿಡ್ ಲಸಿಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಲಸಿಕೆ ಅಭಿಯಾನಕ್ಕೆ ವೇಗ ನೀಡುವ ಬಗ್ಗೆ ಹಾಗೂ ಈ ತಿಂಗಳೊಳಗೆ ಎಲ್ಲರಿಗೂ ಮೊದಲ ಡೋಸ್ ಪೂರ್ಣಗೊಳಿಸಲು ಸೂಚಿಸಲಾಗಿದೆ. ಜತೆಗೆ ಕೊರೊನಾ ಪರೀಕ್ಷೆ, ಆಕ್ಸಿಜನ್ ಘಟಕ ಆರಂಭ, ಸಿವಿಲ್ ಕಾರ್ಯ ಮೊದಲಾದವುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. ನಿಫಾ: ಕಟ್ಟೆಚ್ಚರ
ಕೇರಳದಲ್ಲಿ ಒಬ್ಬ ಬಾಲಕನಲ್ಲಿ ನಿಫಾ ವೈರಸ್ ಸೋಂಕು ಕಂಡುಬಂದಿದೆ. ಅದು ರಾಜ್ಯಕ್ಕೆ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಗಡಿ ಭಾಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಅಭೂತಪೂರ್ವ ವಿಜಯ ಸಿಕ್ಕಿದೆ. ಸುಮಾರು 25 ವರ್ಷಗಳ ಬಳಿಕ ಸ್ವತಂತ್ರವಾಗಿ ಆಡಳಿತ ನಡೆಸಲು ಜನ ಅವಕಾಶ ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಈ ಫಲಿತಾಂಶ ಬಂದಿದ್ದು, ಜನರು ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಆಡಳಿತವನ್ನು ಜನರು ಮೆಚ್ಚಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ.