ಬೆಂಗಳೂರು : ಇಂಜಿನಿಯರಿಂಗ್ ಕಾಲೇಜುಗಳಲ್ಲೂ ಬಿಎಸ್ಸಿ ಪದವಿ ಕೋರ್ಸ್ ಗಳನ್ನು ಆರಂಭಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕ್ರಮಕೈಗೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿಎಸ್ಸಿ ಪದವಿಗೆ ಪ್ರವೇಶ ನೀಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ನಾಲ್ಕು ವರ್ಷದ ಬಿಎಸ್ಸಿ ಕೋರ್ಸ್ ಗಳನ್ನು ಆರಂಭಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತೀರ್ಮಾನಿಸಿದೆ.
ಆರಂಭಿಕ ಹಂತದಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿಎಸ್ಸಿ ಕೋರ್ಸ್ ಗಳನ್ನು ಆರಂಭಿಸಲಿದ್ದು, ನಂತರ ಖಾಸಗಿ ಕಾಲೇಜುಗಳಲ್ಲಿ ಕೂಡ ಪ್ರಾರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇರುವ ಮೂಲಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿದ್ದು, ಪ್ರತಿ ಕೋರ್ಸ್ ಗಳಲ್ಲಿ ಭಾಷಾ ವಿಷಯಗಳು ಇರಲಿದ್ದು, ಇವುಗಳ ಜೊತೆಗೆ ಒಂದು ಮೇಜರ್, ಒಂದು ಮೈನರ್ ಮತ್ತು ಐಚ್ಛಿಕ ವಿಷಯ ಇರಲಿದೆ. ಅಥವಾ ಭಾಷಾ ವಿಷಯಗಳ ಜೊತೆಗೆ 2 ಮೇಜರ್ ಮತ್ತು ಒಂದು ಐಚ್ಛಿಕ ವಿಷಯ ಕಲಿಕೆಗೆ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ.
ಪ್ರಸ್ತುತ ಇಂಜಿನಿಯರಿಂಗ್ ಕಾಲೇಜ್ ಗಳಲ್ಲಿ ಬೇಸಿಕ್ ಸೈನ್ಸ್, ಬೇಸಿಕ್ ಮ್ಯಾಥ್ಸ್, ಬೇಸಿಕ್ ಫಿಸಿಕ್ಸ್, ಬೇಸಿಕ್ ಕೆಮಿಸ್ಟ್ರಿ ಪಾಠ ಮಾಡುವ ಅಧ್ಯಾಪಕರು ಬಿಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ. ಕಾರ್ಯಭಾರ ಹೆಚ್ಚಾದರೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಕುರಿತು ಚಿಂತನೆ ನಡೆದಿದೆ ಎನ್ನಲಾಗಿದೆ.