ಬೆಂಗಳೂರು : ಮಾಂಡಸ್ ಚಂಡಮಾರುತದ ಎಫೆಕ್ಟ್ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ತಣ್ಣನೆಯ ವಾತಾವರಣ ಮುಂದುವರಿದಿದೆ. ನಿನ್ನೆಯಿಂದ ಜಡಿ ಮಳೆ ಕೂಡ ಹೆಚ್ಚಾಗಿದ್ದು, ಇನ್ನೂ ಮೂರು ದಿನ ಇದೇ ಪರಿಸ್ಥಿತಿ ಮುಂದುವರೆಯಲಿದೆ.
ಇಷ್ಟು ದಿನ ಊಟಿ, ಮಲೆನಾಡು ಭಾಗದಲ್ಲಿ ಕಂಡುಬರುತ್ತಿದ್ದ ತಣ್ಣನೆ ವಾತಾವರಣ ಇದೀಗ ಬೆಂಗಳೂರಿಗೂ ಶಿಫ್ಟ್ ಆಗಿದೆ. ಕಳೆದ ಎರಡು ದಿನದಿಂದ ಸೂರ್ಯನನ್ನೇ ಕಾಣದೆ ಕಂಗೆಟ್ಟಿರೋ ಬೆಂಗಳೂರಿಗರಿಗೆ ಇನ್ನು ಎರಡು-ಮೂರು ದಿನ ಇದೇ ರೀತಿಯ ವಾತಾವರಣನ್ನ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಾಂಡಸ್ ಅಬ್ಬರದ ಎಫೆಕ್ಟ್ ಬೆಂಗಳೂರಿನ ಮೇಲೆ ಕೊಂಚ ಹೆಚ್ಚಾಗೆ ಬೀರುತ್ತಿದೆ. ಜೊತೆಗೆ ಇನ್ನೂ ಎರಡು ಮೂರು ದಿನಗಳ ಕಾಲ ಚಂಡಮಾರುತದ ಅಬ್ಬರ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಮೋಡದ ವಾತಾವರಣದ ಜೊತೆಗೆ ಶೀತಗಾಳಿ ಮತ್ತು ಕೆಲವೊಮ್ಮೆ ಜೋರು ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಅವರು ತಿಳಿಸಿದ್ದಾರೆ.