ಜಕಾರ್ತ : ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮಹಿಳೆಯರು, ಮಕ್ಕಳು ಸೇರಿ ಕನಿಷ್ಠ 162 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
5.6 ರಷ್ಟು ತೀತ್ರತೆಯಲ್ಲಿ ಭೂಕಂಪ ಸಂಭವಿಸಿರುವುದಾಗಿ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಆದರೆ ಇದೀಗ ಭೂಕಂಪದ ತೀವ್ರತೆ 6.9ಕ್ಕೆ ತಲುಪಿದ್ದು, ಜನರು ಇನ್ನಷ್ಟು ಆತಂಕಗೊಂಡಿದ್ದಾರೆ.
ಹಲವು ಮನೆ, ಕಟ್ಟಡಗಳು ಕುಸಿದು ಬಿದ್ದಿವೆ. ಕೆಲವರು ತಮ್ಮ ಮಕ್ಕಳೊಂದಿಗೆ ಅಳುತ್ತಾ ಮನೆಗಳಿಂದ ಓಡಿ ಬಂದಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದವರ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿಜೆದಿಲ್ ಹಳ್ಳಿಯೊಂದರಲ್ಲೇ ಸುಮಾರು 25ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ತಂಡಗಳು, ಕುಸಿದ ಮನೆಗಳ ಅವಶೇಷಗಳಲ್ಲಿ ಹೂತು ಹೋಗಿರುವವರ ಹುಡುಕಾಟ ನಡೆಸಿದ್ದಾರೆ. ರಕ್ಷಣಾ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.