Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಕೀಲರ ಮೇಲೆ ದೌರ್ಜನ್ಯಕ್ಕೆ 1 ವರ್ಷ ಜೈಲು ಪ್ರಸ್ತಾಪ

ವಕೀಲರ ಮೇಲೆ ದೌರ್ಜನ್ಯಕ್ಕೆ 1 ವರ್ಷ ಜೈಲು ಪ್ರಸ್ತಾಪ
Bangalore , ಗುರುವಾರ, 15 ಜುಲೈ 2021 (09:06 IST)
ಬೆಂಗಳೂರು (ಜು.15):  ವಕೀಲರು, ಕಾನೂನು ವೃತ್ತಿಪರರ ಮೇಲೆ ದೌರ್ಜನ್ಯ ಎಸಗುವವರಿಗೆ ಜೈಲು ಶಿಕ್ಷೆ, ದಂಡ ವಿಧಿಸುವುದು ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿರುವ ವಕೀಲರ ರಕ್ಷಣೆಗಾಗಿ ಸಿದ್ಧಪಡಿಸಿರುವ ‘ಕರ್ನಾಟಕ ವಕೀಲರ (ದೌರ್ಜನ್ಯ ತಡೆ ಮತ್ತು ರಕ್ಷಣೆ) ಮಸೂದೆ -2021’ ಅನ್ನು ಬೆಂಗಳೂರು ವಕೀಲರ ಸಂಘ (ಎಎಬಿ) ಬುಧವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಸಲ್ಲಿಸಿದೆ.


ವಕೀಲರ ರಕ್ಷಣೆಗೆ ಕಾಯ್ದೆ ರೂಪಿಸುವಂತೆ ಕೋರಿ ಹೈಕೋರ್ಟ್ ಹಿರಿಯ ವಕೀಲರಾದ ಉದಯ್ ಹೊಳ್ಳ, ಸಿ.ಎಚ್. ಹನುಮಂತರಾಯ, ಎ.ಎಸ್. ಪೊನ್ನಣ್ಣ ಹಾಗೂ ಡಿ.ಆರ್. ರವಿಶಂಕರ್ ಅವರನ್ನು ಒಳಗೊಂಡ ಸಮಿತಿಗೆ ಬೆಂಗಳೂರು ವಕೀಲರ ಸಂಘ 2020ರ ಮಾ.1ರಂದು ಕೋರಿತ್ತು. ಇದೀಗ ಸಮಿತಿ ’ಕರ್ನಾಟಕ ವಕೀಲರ ( ದೌರ್ಜನ್ಯ ತಡೆ ಮತ್ತು ರಕ್ಷಣೆ) ಮಸೂದೆ-2021 ಕರಡು ಸಿದ್ಧಪಡಿಸಿ ಸಂಘಕ್ಕೆ ಸಲ್ಲಿಸಿದೆ.
ವಕೀಲರು ‘ಕೀಳು’ ಪದ ಬಳಸಿದರೆ ಸಸ್ಪೆಂಡ್: ಹೊಸ ನಿಯಮ ಜಾರಿ!
ಕರಡು ಮಸೂದೆಯನ್ನು ಎಎಬಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರ ನೇತೃತ್ವದ ನಿಯೋಗ ಬುಧವಾರ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ತುರ್ತಾಗಿ ಜಾರಿಗೊಳಿಸಬೇಕು ಎಂದು ಕೋರಿತು.
ಒಟ್ಟು 12 ಪುಟಗಳ ಕರಡು ಮಸೂದೆಯು 12 ಸೆಕ್ಷನ್ಗಳನ್ನು ಹೊಂದಿದೆ. ವಕೀಲರ ಮೇಲಿನ ದೌರ್ಜನ್ಯ ಎಂದರೇನು, ದೌರ್ಜನ್ಯ ಪ್ರಕರಣ ದಾಖಲಿಸುವುದು, ವಿಚಾರಣೆ ನಡೆಸುವುದು, ಅಪರಾಧಿಗೆ ಶಿಕ್ಷೆ ವಿಧಿಸುವುದು ಸೇರಿದಂತೆ ಇನ್ನಿತರ ನಿಯಮಗಳನ್ನು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ವಕೀಲರ ರಕ್ಷಣೆಗೆ ಕಾಯ್ದೆ ರೂಪಿಸಲು ಇರುವ ಮೂಲ ಕಾರಣಗಳನ್ನು ವಿವರಿಸಲಾಗಿದೆ.
ಮಸೂದೆಯಲ್ಲಿ ಏನಿದೆ:
ವಕೀಲರು-ಕಾನೂನು ವೃತ್ತಿಪರರಿಗೆ ಮುಕ್ತವಾಗಿ ಮತ್ತು ನಿರ್ಭೀತವಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿ ಉಂಟು ಮಾಡುವುದು, ದಬ್ಬಾಳಿಕೆ ಮಾಡುವುದು, ಬೆದರಿಕೆ ಹಾಕುವುದು, ಕಿರುಕುಳ ನೀಡುವುದು ಮತ್ತು ಅಸೂಯೆಯಿಂದ ಪ್ರಾಸಿಕ್ಯೂಷನ್ಗೆ ಒಳಪಡಿಸಲು ಯತ್ನಿಸುವುದು ಸೇರಿದಂತೆ ಯಾವುದೇ ರೀತಿಯಲ್ಲೂ ಕೋರ್ಟ್ ಒಳಗೆ ಅಥವಾ ಹೊರಗೆ ತೊಂದರೆ ಉಂಟು ಮಾಡುವುದು ‘ದೌರ್ಜನ್ಯ’ ಎನ್ನಿಸಿಕೊಳ್ಳಲಿದೆ. ಹಾಗೆಯೇ, ವಕೀಲರ ಕುಟುಂಬ ಸದಸ್ಯರಿಗೆ ತೊಂದರೆ, ಆಸ್ತಿ ನಷ್ಟಉಂಟುಮಾಡುವುದು, ಕೀಳು ಭಾಷೆ ಬಳಸಿ ನಿಂದಿಸುವುದು ಕೂಡ ವಕೀಲರ ಮೇಲಿನ ದೌರ್ಜನ್ಯವಾಗಲಿದೆ.
ಅಕ್ರಮ ಬಂಧನ ಹಾಗೂ ದುರುದ್ದೇಶಪೂರ್ವಕ ಪ್ರಾಸಿಕ್ಯೂಷನ್ ನಿಂದ ವಕೀಲರಿಗೆ ರಕ್ಷಣೆ ನೀಡುವುದು. ಒಂದೊಮ್ಮೆ ವಕೀಲರ ವಿರುದ್ಧ ಕ್ರಮ ಜರುಗಿಸಬೇಕಾದ ಸಂದರ್ಭದಲ್ಲಿ ಪೊಲೀಸರು ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಪ್ರೇಟ್ನಿಂದ (ಮುಖ್ಯ ನ್ಯಾಯಿಕ ದಂಡಾಧಿಕಾರಿ) ಅನುಮತಿ ಪಡೆಯುವುದು ಕಡ್ಡಾಯ. ವಕೀಲರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಅಥವಾ ಮೇಲಿನ ಹಂತದ ಪೊಲೀಸ್ ಅಧಿಕಾರಿ ಎಫ್ಐಆರ್ ದಾಖಲಿಸಿ 90 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು.
ಮುಖ್ಯ ನ್ಯಾಯಿಕ ದಂಡಾಧಿಕಾರಿ ಶ್ರೇಣಿಗಿಂತ ಕಡಿಮೆಯಲ್ಲದ ಕೋರ್ಟ್ಗಳಲ್ಲಿ ನಿತ್ಯ ವಿಚಾರಣೆ ನಡೆಸಿ (ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ) ಆರು ತಿಂಗಳೊಳಗೆ ಪ್ರಕರಣ ಇತ್ಯರ್ಥಪಡಿಸಬೇಕು. ವಕೀಲರ ಮೇಲೆ ದೌಜನ್ಯ ಎಸಗಿದ ವ್ಯಕ್ತಿಗೆ ಒಂದು ವರ್ಷದವರೆಗೆ ಜೈಲು ಅಥವಾ ಒಂದು ಲಕ್ಷ ರುಪಾಯಿವರೆಗೆ ದಂಡ ವಿಧಿಸಬಹುದು. ಅರ್ಹ ಪ್ರಕರಣಗಳಲ್ಲಿ ದಂಡ ಮತ್ತು ಜೈಲು ಎರಡನ್ನೂ ವಿಧಿಸಬಹುದು. ಎರಡನೇ ಬಾರಿ ಅಥವಾ ಪುನರಾವರ್ತಿತ ಅಪರಾಧಕ್ಕೆ ಆರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರು.ವರೆಗೆ ದಂಡ ವಿಧಿಸಬಹುದು. ದೌರ್ಜನ್ಯ ಪ್ರಕರಣದಲ್ಲಿ ವಕೀಲರ ಆಸ್ತಿಗೆ ನಷ್ಟಉಂಟಾಗಿದ್ದರೆ, ಅಪರಾಧಿಯಿಂದಲೇ ಪರಿಹಾರ ಕೊಡಿಸುವುದು.


Share this Story:

Follow Webdunia kannada

ಮುಂದಿನ ಸುದ್ದಿ

1-10ನೇ ತರಗತಿಗೆ ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯ: ಸುರೇಶ್