ಬೆಂಗಳೂರು: ಲಾಕ್ ಡೌನ್ ಜಾರಿಯಾದ ಬಳಿಕ ಟಿವಿ ಲೋಕ ಸ್ತಬ್ಧವಾಗಿ ತಿಂಗಳ ಮೇಲಾಯಿತು. ವೀಕ್ಷಕರಿಗೆ ತಮ್ಮ ಮೆಚ್ಚಿನ ಕಾರ್ಯಕ್ರಮ ಎಲ್ಲಿ ನಿಂತು ಹೋಗಿತ್ತು ಎಂಬುದೇ ಮರೆತು ಹೋಗಿದೆ. ಹೀಗಿರುವಾಗ ಪುನರಾರಂಭಿಸುವ ಚಿಂತೆಯಲ್ಲಿ ಟಿವಿ ಲೋಕವಿದೆ.
ಒಂದು ಧಾರವಾಹಿಯೇ ಆಗಲಿ, ರಿಯಾಲಿಟಿ ಶೋವೇ ಆಗಲಿ ಕೊನೆಯ ಬಾರಿಗೆ ಏನಾಗಿತ್ತು ಎಂಬುದು ಜನರಿಗೆ ಮರೆತೇ ಹೋಗುವಷ್ಟು ದಿನಗಳಾಗಿವೆ. ಹೀಗಾಗಿ ಎಲ್ಲವನ್ನೂ ಹೊಸದಾಗಿ ಆರಂಭಿಸುವಷ್ಟೇ ಶ್ರದ್ಧೆಯಿಂದ ಆರಂಭಿಸುವ ಹೊಣೆಗಾರಿಕೆ ಟಿವಿ ಲೋಕದ ನಿರ್ಮಾಪಕರು, ನಿರ್ದೇಶಕರ ಮೇಲಿದೆ.
ಇದರ ನಡುವೆ ಮೊದಲಿದ್ದ ಟಿಆರ್ ಪಿ, ವೀಕ್ಷಕರ ಸಂಖ್ಯೆ ಮುಂದೆ ಮರಳಿ ಪಡೆಯುವುದು ಸವಾಲಿನ ಕೆಲಸವಾಗಲಿದೆ. ಹೀಗಾಗಿ ಮತ್ತೆ ಆದಷ್ಟು ಬೇಗ ಶೂಟಿಂಗ್ ಶುರು ಮಾಡಲು ಟಿವಿ ಮಾಧ‍್ಯಮಗಳು ಉತ್ಸುಕವಾಗಿದೆ. ಈಗಾಗಲೇ ಟೆಲಿವಿಷನ್ ಅಸೋಸಿಯೇಷನ್ ಮುಖಾಂತರ ಸಿಎಂಗೆ ಶೂಟಿಂಗ್ ಗೆ ಅವಕಾಶ ಕೊಡಲು ಮನವಿ ಹೋಗಿದ್ದು, ಸರ್ಕಾರ ಷರತ್ತುಬದ್ಧ ಒಪ್ಪಿಗೆ ನೀಡಿದೆ. ಹಾಗಾಗಿ ಶೂಟಿಂಗ್ ಏನೋ ಆರಂಭವಾಗಲಿದೆ. ಆದರೆ ಮತ್ತೆ ಹಳೆಯ ಹಳಿಗೆ ಮರಳುವುದು ಧಾರವಾಹಿ ತಂಡಗಳಿಗೆ ಸವಾಲಿನ ಕೆಲಸವಾಗಲಿದೆ.